ಮಂಗಳೂರು:ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏಪ್ರಿಲ್ 22ರಿಂದ 30ರವರೆಗೆ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಕುಟುಂಬ ಸಮೇತರಾಗಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.25ರಂದು ಸಂಜೆ ದೇವರಿಗೆ ಬೆಳ್ಳಿಯ ಕಲಶವನ್ನು ಶಿಲ್ಪಾ ಶೆಟ್ಟಿ ಸಮರ್ಪಿಸಲಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಕ್ತೇಸರ ಮಧುಕರ ಅಮೀನ್ ಮಾತನಾಡಿ, ನಾಗಮಂಡಲ ಧಾರ್ಮಿಕ ಕಾರ್ಯಕ್ರಮ ಸಂಬಂಧ ಶಿಲ್ಪಾ ಶೆಟ್ಟಿ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಬ್ರಹ್ಮಕುಂಭಾಭಿಷೇಕಕ್ಕೆ ಬೇಕಾದ ಬೆಳ್ಳಿಯ ಕಲಶವನ್ನು ನೀಡಲು ಒಪ್ಪಿದ್ದಾರೆ. ಏಪ್ರಿಲ್ 25, 26, 27ರ ಮೂರು ದಿನಗಳ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ, ಪತಿ ರಾಜ್ ಕುಂದ್ರಾ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.