ಕರ್ನಾಟಕ

karnataka

ETV Bharat / state

ಬೆಣ್ಣೆ ನಗರಿಯಲ್ಲಿ ಜಂಗಿ ಕುಸ್ತಿ ಪಂದ್ಯಾಟ: ಪ್ರಶಸ್ತಿಗಾಗಿ ಪೈಲ್ವಾನ್​ಗಳ ನಡುವೆ ಕಾದಾಟ - Jangi Kusti Tournament - JANGI KUSTI TOURNAMENT

ದುಗ್ಗಮ್ಮ ದೇವಿಯ ಐತಿಹಾಸಿಕ ಜಾತ್ರೆ ಹಿನ್ನೆಲೆ ಆಯೋಜನೆಗೊಂಡಿರುವ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ ರಾಷ್ಟ್ರೀಯ ಮಟ್ಟದ ಪೈಲ್ವಾನ್​ಗಳು ಭಾಗವಹಿಸಿದ್ದಾರೆ.

Jangi Kusti Tournament
ಬೆಣ್ಣೆ ನಗರಿಯಲ್ಲಿ ಜಂಗಿ ಕುಸ್ತಿ ಪಂದ್ಯಾಟ

By ETV Bharat Karnataka Team

Published : Mar 23, 2024, 3:39 PM IST

Updated : Mar 23, 2024, 5:58 PM IST

ಬೆಣ್ಣೆ ನಗರಿಯಲ್ಲಿ ಜಂಗಿ ಕುಸ್ತಿ ಪಂದ್ಯಾಟ

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಎಂದರೆ ದೇಸೀ ಕ್ರೀಡೆ ಕುಸ್ತಿಗೆ ಹೆಸರುವಾಸಿ. ಇಲ್ಲಿನ ಗರಡಿಗಳಲ್ಲಿ ಪಳಗಿರುವ ಪೈಲ್ವಾನ್​ಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಉದಾಹರಣೆಗಳಿವೆ. ಅದರಂತೆ ದಾವಣಗೆರೆಯಲ್ಲಿ ನಡೆಯುವ ಕೆಂಪು ಮಣ್ಣಿ‌ನ ಕುಸ್ತಿ ಇಡೀ ದೇಶದಲ್ಲಿ ಖ್ಯಾತಿ ಪಡೆದಿದೆ. ಅಲ್ಲದೇ ದುರ್ಗಾಂಭಿಕ ದೇವಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಜರಗುವ ಈ ಕುಸ್ತಿಗೆ ಹೊರ ರಾಜ್ಯಗಳಿಂದ ಪೈಲ್ವಾನ್​ಗಳು ಭಾಗವಹಿಸಿತ್ತಾರೆ. ಶುಕ್ರವಾರ ಆರಂಭವಾದ ಜಂಗಿ ಕುಸ್ತಿಯಲ್ಲಿ ಪೈಲ್ವಾನ್​ಗಳು ಸೆಣಸಾಟ ಮಾಡಿದರು.‌

ಹೌದು, ದಾವಣಗೆರೆ ನಗರದ ದುಗ್ಗಮ್ಮ ದೇವಿಯ ಐತಿಹಾಸಿಕ ಜಾತ್ರೆ ಸಂಬಂಧ ಬೀರಲಿಂಗೇಶ್ವರ ದೇವಾಲಯ ಬಳಿ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ. ಅಪಾರ ಜನಸ್ತೋಮದ ನಡುವೆ ಪೈಲ್ವಾನ್​ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಇನ್ನು ಪ್ರೇಕ್ಷಕರು ಸಿಳ್ಳೆ – ಕೇಕೆ ಹೊಡೆದು ಪೈಲ್ವಾನ್​ಗಳನ್ನು ಹುರಿದುಂಬಿಸಿದರು. ವಿವಿಧ ರಾಜ್ಯಗಳಿಂದ ಬಂದ ರಾಷ್ಟ್ರೀಯ ಮಟ್ಟದ ಜಗಜಟ್ಟಿಗಳ ಜಂಗಿ ಕುಸ್ತಿ ಪಂದ್ಯಾವಳಿ ರೋಚಕವಾಗಿದೆ.

1948 ರಿಂದ ಕುಸ್ತಿ ಪಂದ್ಯಾಟ ಆಯೋಜನೆ:ದುರ್ಗಾಂಭಿಕ ದೇವಾಸ್ಥಾನದ ಕಮಿಟಿ 1948 ರಿಂದ ಈ ಕುಸ್ತಿ ಪಂದ್ಯಾಟವನ್ನು ಆಯೋಜನೆ ಮಾಡುತ್ತಾ ಬಂದಿದೆ‌. ರಾಜ ಮಹಾರಾಜರ ಕಾಲದಲ್ಲಿ ಇದ್ದ ಕ್ರೀಡೆ ದಾವಣಗೆರೆ ಯುವಕರ ಉಸಿರಾಗಿದೆ. ಶುಕ್ರವಾರದಿಂದ ಎರಡು ದಿನಗಳ ಕಾಲ ಜರುಗುವ ಈ ಕುಸ್ತಿಯಲ್ಲಿ ಕ್ರೀಡಾಪಟುಗಳ ಸೆಣಸಾಟ ಕಣ್ತುಂಬಿಕೊಳ್ಳಲು ಹತ್ತು ಸಾವಿರ ಜನ ಕುಳಿತು ನೋಡುವ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ದೆಹಲಿ ಹೀಗೆ ಹಲವಾರು ಕಡೆಯಿಂದ ಕುಸ್ತಿಪಟುಗಳು ಭಾಗಿಯಾಗಿ ಕುಸ್ತಿ ಆಡುವ ಮೂಲಕ ಪ್ರೇಕ್ಷಕರನ್ನು ಸಂತಸ ಪಡಿಸಿದರು.

"ಇಲ್ಲಿ ಗೆದ್ದವರಿಗೆ ಬೆಳ್ಳಿ ಗದೆ, ಒಂದು ಲಕ್ಷ ಬಹುಮಾನ ಇರಿಸಲಾಗಿದೆ. ಇನ್ನು ಹೈಟೆಕ್ ಜಿಮ್​ಗಳಿದ್ದು, ಕುಸ್ತಿ ಕ್ರಿಡೆ ಮಾಸುತ್ತಿದೆ. ಆದರೆ ಇದನ್ನು ಉಸಿರಾಗಿಸಿಕೊಂಡು ಮನಸುಮುಟ್ಟುವ ಹಾಗೇ ಪೈಲ್ವಾನ್​ಗಳು ಕುಸ್ತಿ ಆಡುತ್ತಿದ್ದಾರೆ. ಇನ್ನು ಭಾರತವನ್ನು ಪ್ರತಿನಿಧಿಸಿದ ಸುಶೀಲ್ ಕುಮಾರ್ ಚಿನ್ನದ ಪದಕ ಪಡೆದಾಗಿನಿಂದ ಈ ಕ್ರೀಡೆಯ ಉತ್ಸಾಹ ಇನ್ನೂ ಹೆಚ್ಚಾಗಿದೆ" ಎಂದು ರೆಫ್ರಿ ವೀರೇಶ್ ಮಾಹಿತಿ ನೀಡಿದರು.

ಕೆಂಮಣ್ಣಿನಲ್ಲಿದೆ ಖದರ್:"ದಾವಣಗೆರೆಯಲ್ಲಿ ಹತ್ತು ಗರಡಿಮನೆಗಳಿದ್ದು, ಹತ್ತು ಹದಿನೈದು ಯುವಕರು ಇಂದಿಗೂ ಕುಸ್ತಿ ಕಲಿಯುತ್ತಿದ್ದಾರೆ. ಇದಲ್ಲದೆ ಇಲ್ಲಿ ಕ್ರೀಡಾ ವಿದ್ಯಾರ್ಥಿನಿಲಯ ಇದ್ದು, ಒಂದು ರಾಜ್ಯ ಮಟ್ಟದ ಕುಸ್ತಿ ಹಾಲ್ ಕೂಡಾ ಇದೆ. ಈ ಹಾಲ್​ನಲ್ಲಿ ಕುಸ್ತಿ ತರಬೇತಿ ಪಡೆದ ರಫೀಕ್ ಹೋಳಿ, ಕಾರ್ತಿಕ್ ಕಾಟೆ ಮುಂತಾದ ಕುಸ್ತಿ ಪಟುಗಳು ರಾಜ್ಯ ದೇಶವನ್ನು ಪ್ರತಿನಿಧಿಸಿ ಚಿನ್ನ ಬೆಳ್ಳಿ ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ. ಇನ್ನು ಈ ಕುಸ್ತಿಗೆ ಕೆಂಪು ಮಣ್ಣನ್ನು ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಈ ಮಣ್ಣಿನಲ್ಲೇ ಕುಸ್ತಿ ಪಟುಗಳು ಸಾಮ್ ತೆಗೆದು ಕುಸ್ತಿ ಕಲಿಯುತ್ತಿದ್ದಾರೆ. ಕುಸ್ತಿ ಕಲಿಯಲು ಕೆಂಪು ಮಣ್ಣಿನ ಕುಸ್ತಿ, ಮ್ಯಾಟ್ ಕುಸ್ತಿ ಮಾಡಲಾಗುತ್ತದೆ. ದಾವಣಗೆರೆಯಲ್ಲಿ ಕೆರೆ ಗರಡಿ ಮನೆ, ಮಾಕಾನ್ ತಾಲಿಮ್ ಗರಡಿ ಮನೆಗಳು ವಿಶೇಷ ಗರಡಿ ಮನೆಗಳಾಗಿವೆ. ಇನ್ನು ಕೆಂಪು ಮಣ್ಣಿನಲ್ಲಿ ಮೊದಲು ಅದಕ್ಕೆ ಬೇವಿನ ಎಣ್ಣೆ, ಹೂರ್ ಮಂಜು, ತುಪ್ಪ, ಮೊಸರು ಹಾಗೂ ಪೈಲ್ವಾನ್​ಗಳ ಬೆವರು ಹಾಕಿ ಹದ ಮಾಡಿ ಕುಸ್ತಿ ಆಡಲಾಗುತ್ತದೆ. ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಕುಸ್ತಿ ಆಟ ನಮ್ಮ ದಾವಣಗರೆಯಲ್ಲಿದೆ ಎನ್ನುವುದೇ ಖುಷಿ" ಎಂದು ವೀರೇಶ್ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಿದ್ದೇಶ್ವರ ಜಾತ್ರೆ: ಜಂಗಿ ನಿಖಾಲಿ ಕುಸ್ತಿ ಆಯೋಜನೆ.. ಜಗಜಟ್ಟಿ ಪೈಲ್ವಾನರ ಅದ್ಭುತ ಕಾಳಗ

Last Updated : Mar 23, 2024, 5:58 PM IST

ABOUT THE AUTHOR

...view details