ಕರ್ನಾಟಕ

karnataka

ETV Bharat / state

'ಜೈ ಶ್ರೀರಾಮ್' ಎಂಬುದು ಬಿಜೆಪಿಯವರ ಸ್ವತ್ತಲ್ಲ, ಗಾಂಧೀಜಿಯವರೇ 'ಹೇ ರಾಮ್' ಎಂದಿದ್ದರು: ಸಿಎಂ - ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿಯವರು ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ರಾಮ ಭಕ್ತರಾಗಿದ್ದ ಗಾಂಧೀಜಿಯವರ ಹತ್ಯೆಗೈದ ಗೋಡ್ಸೆಯನ್ನು ಪಾಲಿಸುವವರನ್ನು ಜನರು ನಂಬುವುದಿಲ್ಲ. 'ಜೈ ಶ್ರೀರಾಮ್' ಎಂಬುದು ಬಿಜೆಪಿಯವರ ಸ್ವತ್ತಲ್ಲ. ಮಹಾತ್ಮ ಗಾಂಧೀಜಿಯವರೇ 'ಹೇ ರಾಮ್' ಅಂದಿದ್ದರು ಎಂದು ಸಿಎಂ ತಿಳಿಸಿದರು.

CM Siddaramaiah
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Jan 30, 2024, 4:07 PM IST

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಶ್ರೇಷ್ಠ ಹಿಂದೂ. ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ವಾದರ್ಶಗಳೇ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. KPCC ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.

ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಗಾಂಧೀಜಿಯವರನ್ನು ಗೋಡ್ಸೆ ಹತ್ಯೆಗೈದರು. ಗೋಡ್ಸೆ ಆರ್ ಎಸ್ ಎಸ್ ಸಂಘಟನೆ ಹಾಗೂ ಬಿಜೆಪಿಯವರ ಆರಾಧ್ಯ ದೈವ. ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಮಹಾತ್ಮ ಗಾಂಧೀಜಿ ಒಬ್ಬ ಶ್ರೇಷ್ಠ ಹಿಂದೂ. ಅಂತಹ ಹಿಂದೂ ಭಕ್ತನನ್ನೇ ಗುಂಡಿಕ್ಕಿ ಕೊಂದವರೇ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಗಾಂಧೀಜಿಯವರನ್ನು ಮಾತ್ರ ಮಹಾತ್ಮ ಮತ್ತು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸಿದರು. ನುಡಿದಂತೆ ನಡೆಯುತ್ತಿದ್ದರು. ದೇಶ ವಿಭಜನೆಯಾದಾಗ ಸ್ವಾತಂತ್ರ್ಯವನ್ನು ಸಂಭ್ರಮಿಸದೇ ಹಿಂದೂ ಮುಸಲ್ಮಾನರ ನಡುವೆ ಸೌಹಾರ್ದತೆಯನ್ನು ಸ್ಥಾಪಿಸಲು ಗಾಂಧೀಜಿಯವರು ಶ್ರಮಿಸಿದರು. ಭಾರತದ ಹಿಂದೂಗಳು ಪಾಕಿಸ್ತಾನಕ್ಕೆ ಹೋಗದೇ ಇಲ್ಲಿಯೇ ಉಳಿಯಬೇಕೆಂದು ಪ್ರಯತ್ನಿಸಿದರು ಎಂದು ತಿಳಿಸಿದರು.

ಸರ್ವ ಜನಾಂಗದ ಒಳಿತನ್ನು ಬಯಸುತ್ತದೆ:ದೇಶ ರಾಮರಾಜ್ಯವಾಗಬೇಕೆಂಬ ಚಿಂತನೆಯುಳ್ಳ ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವವರು ‘ತಾವು ಮಾತ್ರ ಹಿಂದೂಗಳು’ ಎಂದು ಪ್ರತಿಪಾದಿಸುತ್ತಿದ್ದಾರೆ. ಮನುಷ್ಯರ ನಡುವೆ ವೈಷಮ್ಯ ಬೆಳೆಸುವುದನ್ನು ಯಾವ ಧರ್ಮವೂ ಬೋಧಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಒಳಿತನ್ನು ಬಯಸುವ ಹಾಗೂ ಸರ್ವ ಧರ್ಮಗಳನ್ನು ಗೌರವಿಸುವ ಪಕ್ಷ. ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು, ಮಾನವರಾಗಿ ಸಾಮರಸ್ಯದಿಂದ ಬಾಳುವುದೇ ನಮ್ಮ ಮುಂದಿರುವ ಸವಾಲು ಎಂದರು.

ಇದನ್ನೂ ಓದಿ:ನಾನು ಬೆಂಕಿ ಹಚ್ಚಲು ಮಂಡ್ಯಕ್ಕೆ ಹೋಗಿರಲಿಲ್ಲ, ಬೆಂಕಿ ಹಚ್ಚಿದ್ದೇ ನೀವು: ಹೆಚ್​ಡಿಕೆ ವಾಗ್ದಾಳಿ

ಶ್ರೀರಾಮನನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ:ಬಿಜೆಪಿಯವರು ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ರಾಮ ಭಕ್ತರಾಗಿದ್ದ ಗಾಂಧೀಜಿಯವರ ಹತ್ಯೆಗೈದ ಗೋಡ್ಸೆಯನ್ನು ಪಾಲಿಸುವವರನ್ನು ಜನರು ನಂಬುವುದಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ರಾಮನ ಆದರ್ಶವನ್ನು ನಿಜ ಅರ್ಥದಲ್ಲಿ ಪಾಲಿಸುವ ನಾನು ಜನವರಿ 22 ರಂದು ನೂತನ ಶ್ರೀರಾಮ ಮಂದಿರವನ್ನು ಸ್ಥಳೀಯವಾಗಿ ಉದ್ಘಾಟಿಸಿದೆ. 'ಜೈ ಶ್ರೀರಾಮ್' ಎಂಬುದು ಬಿಜೆಪಿಯವರ ಸ್ವತ್ತಲ್ಲ. ಮಹಾತ್ಮ ಗಾಂಧೀಜಿಯವರೇ 'ಹೇ ರಾಮ್' ಅಂದಿದ್ದರು ಎಂದು ತಿಳಿಸಿದರು.

ದೇಶದ ಆಡಳಿತದಿಂದ ಬಿಜೆಪಿಯನ್ನು ದೂರವಿಡುವುದೇ ಗಾಂಧೀಜಿಯವರಿಗೆ ಸಲ್ಲಿಸುವ ಗೌರವವಾಗಿದೆ. ಬಿಜೆಪಿಯವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಕೇವಲ ಬಾಯಿ ಮಾತಾಗಿದ್ದು, ಜಾತ್ಯತೀತತೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಆದರೆ ಈ ಮಾತಿಗೆ ವಿರುದ್ಧವಾಗಿ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ವಾಸ್ತವವಾಗಿ ದೇಶದ ಐಕ್ಯತೆ, 143 ಕೋಟಿ ಜನ ಅನ್ಯೋನ್ಯವಾಗಿ ಸೌಹಾರ್ದಯುತವಾಗಿ ಬಾಳ ಬೇಕಾದರೆ ಯಾರನ್ನೂ ಕೂಡ ದ್ವೇಷಿಸಬಾರದು. ದೇಶಭಕ್ತಿಯ ಬಗ್ಗೆ ಬಿಜೆಪಿ ನಮಗೆ ಹೇಳಿಕೊಡುವ ಅಗತ್ಯವಿಲ್ಲ. ಬಿಜೆಪಿಯವರಿಗೆ ದೇಶದ ಇತಿಹಾಸವೇ ತಿಳಿದಿಲ್ಲ. ಅದಕ್ಕೆ ಅಂಬೇಡ್ಕರ್ ಅವರು ಯಾರಿಗೆ ಇತಿಹಾಸ ತಿಳಿದಿಲ್ಲವೋ ಅವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದಿದ್ದು. ದೇಶದ ಆಡಳಿತದಿಂದ ಬಿಜೆಪಿಯನ್ನು ದೂರವಿಡುವುದೇ ಗಾಂಧೀಜಿಯವರಿಗೆ ಸಲ್ಲಿಸುವ ಗೌರವ. ಅವರು ಅಧಿಕಾರದಲ್ಲಿರಬಾರದು. ದೇಶದಲ್ಲಿ ಐಕ್ಯತೆ , ಶಾಂತಿಯಿಂದ ಇರಲು, ಎಲ್ಲರೂ ಮನುಷ್ಯರಾಗಿ ಬಾಳಬೇಕಾದರೆ ಜಾತ್ಯತೀತತೆಯಲ್ಲಿ ನಂಬಿಕೆ ಇರಬೇಕು. ಗಾಂಧೀಜಿಯವರನ್ನು ಸ್ಮರಿಸಿ, ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ಸಿಎಂ ಕರೆ ನೀಡಿದರು.

ರಾಮನ ಹೆಸರು ಹೇಳಲು ನಾವು ಹಿಂಜರಿಯಬಾರದು: ಸಚಿವ ಕೆ.ಹೆಚ್.ಮುನಿಯಪ್ಪ
ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ರಾಮನ ಹೆಸರು ಹೇಳಲು ನಾವು ಹಿಂಜರಿಯಬಾರದು. ಅದೇ ರೀತಿ ಮುಸ್ಲಿಮರ ವಿಶ್ವಾಸ ಪಡೆಯುವುದರಲ್ಲೂ ನಾವು ಹಿಂಜರಿಯಬಾರದು. ಒಟ್ಟಿಗೆ ಧೈರ್ಯವಾಗಿ ಎಲ್ಲ ಧರ್ಮದವರನ್ನು ತೆಗೆದುಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಗಾಂಧೀಜಿಯವರು ಯಾವಾಗಲೂ ರಾಮ ಜಪ ಮತ್ತು ಮಂತ್ರ ಪಠಣೆ ಮಾಡುತ್ತಿದ್ದರು. ನಾವು ಅದನ್ನೇ ಹಿಡಿದುಕೊಂಡು ಹೋಗಬೇಕಾಗಿದೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರಘುಪತಿ ರಾಘವ ರಾಜಾರಾಮ್ ಈಶ್ವರ ಅಲ್ಲಾ ತೇರೆನಾಮ್​ ಈ ಮಂತ್ರವನ್ನು ನಾವು ಪಾಲಿಸಿಕೊಂಡು ಹೋಗಬೇಕು. ಅದರ ಮೇಲೆ ನಮ್ಮ ಕಾರ್ಯಕ್ರಮಗಳನ್ನು ಶುರು ಮಾಡಬೇಕು. ಹಿಂದೂಗಳಿರಬಹುದು, ಮುಸ್ಲಿಮರು ಇರಬಹುದು. ನಾವು ರಾಮನ ವಿರೋಧಿಗಳಲ್ಲ. ರಾಮನ ಹೆಸರು ಹೇಳಿಕೊಂಡೇ ಗಾಂಧೀಜಿ ಪ್ರಾಣವನ್ನು ಬಿಟ್ರು. ಹೀಗಾಗಿ ನಾವು ಕೂಡ ರಾಮನ ಹೆಸರನ್ನು ಹೇಳಬೇಕಾಗುತ್ತದೆ ಎಂದರು.

ಎಲ್ಲ ಕಾರ್ಯಕ್ರಮಗಳಲ್ಲೂ ನಾವು ರಘುಪತಿ ರಾಘವ ಕೀರ್ತನೆಯನ್ನು ಹೇಳಿಕೊಂಡೇ ಹೆಜ್ಜೆ ಇಡಬೇಕು. ಆಗ ಅವರೇ ಒಂದು ಹೆಜ್ಜೆ ಹಿಂದೆ ಹೋಗ್ತಾರೆ. ಇವರು ಅಯೋಧ್ಯೆಯಲ್ಲಿ ರಾಮನನ್ನು ಸೀತೆಯಿಂದ ಬೇರ್ಪಡಿಸಿ ಬಿಟ್ಟಿದ್ದಾರೆ. ಯಾವುದೇ ಒಂದು ಸಣ್ಣ ಊರಲ್ಲೂ ರಾಮ ಲಕ್ಷ್ಮಣ ಸೀತೆ ಆಂಜನೇಯ ಒಟ್ಟಿಗೆ ಇರ್ತಾರೆ. ರಾಜಕೀಯಕ್ಕಾಗಿ ರಾಮನನ್ನು ವರ್ಗೀಕರಣ ಮಾಡಿ ವೈಭವೀಕರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details