ಬೆಳಗಾವಿ:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಟಸ್ಥರಾಗುಳಿದಿದ್ದ ರಾಮದುರ್ಗದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಮನವೊಲಿಸುವಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಯಶಸ್ವಿಯಾಗಿದ್ದಾರೆ.
ನಿನ್ನೆ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಬಳಿಕ ಇಂದು ರಾಮದುರ್ಗದ ಮಹಾದೇವಪ್ಪ ಯಾದವಾಡ ನಿವಾಸಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಜತೆಗಿದ್ದರು.
ಎರಡು ದಶಕಗಳ ಕಾಲ ಶೆಟ್ಟರ್ ಜತೆಗೆ ಗುರುತಿಸಿಕೊಂಡಿದ್ದ ಮಹಾದೇವಪ್ಪ ಯಾದವಾಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದಾಗಿದ್ದರು. ಆಪರೇಶನ್ ಹಸ್ತಕ್ಕೂ ಕೈ ಹಾಕಿದ್ದರು. ಇದರಿಂದ ಅಲರ್ಟ್ ಆದ ಶೆಟ್ಟರ್ ಖುದ್ದು ಯಾದವಾಡರ ಮನೆಗೆ ಭೇಟಿ ನೀಡಿ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.