ಹುಬ್ಬಳ್ಳಿ: "ಆಮ್ ಆದ್ಮಿ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಸಿಎಂ, ಡಿಸಿಎಂ ಎಲ್ಲರೂ ಜೈಲಿಗೆ ಹೋಗಿ ಬಂದವರು. ಆಪ್ ಪಕ್ಷದ ಎಂಟತ್ತು ಜನ ಸಚಿವರೂ ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಹ ಕೆಲವೊಬ್ಬರು ಜೈಲಿನಲ್ಲಿದ್ದಾರೆ" ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, "ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳುತ್ತಾರೆ. ಇಲ್ಲಿಯವರೆಗೂ ಇಂಡಿ ಕೂಟದ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು..? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಇಂಡಿ ಮೈತ್ರಿಕೂಟಕ್ಕೆ ಹೋಗಬಾರದಿತ್ತು. ಈಗ ಚುನಾವಣೆ ಹಿನ್ನೆಲೆ ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ದೇಶವನ್ನು ಲೂಟಿ ಮಾಡಿದ ನಂಬರ್ ಒನ್ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿದೆ. ರಾಹುಲ್ ಗಾಂಧಿ ಬಗ್ಗೆ ಈಗ ಕೇಜ್ರಿವಾಲ್ ಅವರಿಗೆ ಜ್ಞಾನೋದಯವಾಗಿದೆ" ಎಂದರು.
ಬಿಜೆಪಿ ಆಂತರಿಕ ಒಳಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಪಕ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳೆದಾಗ ಆಂತರಿಕ ವೈಮನಸ್ಸು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ ಹಾಡಲಿದ್ದಾರೆ" ಎಂದು ತಿಳಿಸಿದರು.