ಬೆಳಗಾವಿ:ಸಾರ್ವಜನಿಕ ಸಭೆ ಉದ್ದೇಶಿಸಿ ಬೆಳಗಾವಿಯಲ್ಲಿ ಏಪ್ರಿಲ್ 28ರಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಒಂದು ಗಂಟೆ ಮೊದಲೇ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಪ್ರತಿಯೊಬ್ಬರು ಆಗಮಿಸಿ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ವೇದಿಕೆ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ಏ. 27ರಂದು ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಅದೇ ರೀತಿ ಯಾವುದೇ ರೋಡ್ ಶೋ ಇಲ್ಲ. ರಾಜ್ಯ ನಾಯಕರು ಎಲ್ಲರೂ ಬರ್ತಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಅಂದಾಜು ಲೆಕ್ಕ ಹಾಕಿಲ್ಲ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಜನರನ್ನು ಉದ್ದೇಶಿಸಿ ಮೋದಿ ಪ್ರಚಾರ ನಡೆಸಲಿದ್ದಾರೆ. ಇಡೀ ಲೋಕಸಭಾ ಕ್ಷೇತ್ರದಿಂದ ಬರಬೇಕು ಎಂದು ಕರೆಕೊಟ್ಟಿದ್ದೇವೆ ಎಂದು ವಿವರಿಸಿದರು.
ಬೆಳಗ್ಗೆ 9 ಗಂಟೆಗೆ ಜನ ಬರ್ತಾರಾ ಇದು ಚಾಲೆಂಜ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಚಾಲೆಂಜ್ ಇದ್ದೇ ಇರುತ್ತೆ. ಆದರೆ ಎಲ್ಲರೂ ಬರ್ತಾರೆ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಜನ ಬರ್ತಾರೆ ಎಂದ ಶೆಟ್ಟರ್, ಈವರೆಗೆ ಸಭೆ ಮಾಡುವುದರ ಬಗ್ಗೆ ನಿರ್ಧಾರ ಆಗಿಲ್ಲ. ಮೋದಿಯವರು ಬಂದ ಮೇಲೆಯೇ ನಿರ್ಧಾರ ಆಗುತ್ತದೆ. ಇನ್ನು ನೇಹಾ ತಂದೆ ತಾಯಿಯನ್ನು ಸಭೆಗೆ ಕರೆಸುವ ಬಗ್ಗೆ ಸದ್ಯ ಚರ್ಚೆ ಆಗಿಲ್ಲ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.
ಕಾಂಗ್ರೆಸ್ ಸ್ಪರ್ಧಿಸಿದ್ದೇ 230 ಕ್ಷೇತ್ರಗಳಲ್ಲಿ:ಕಾಂಗ್ರೆಸ್ ನವರಿಗೆ ಶೆಟ್ಟರ್ ವಿರುದ್ಧ ಮಾತನಾಡಲು ಯಾವುದೇ ವಿಷಯ ಇಲ್ಲ. ಇದು ಪಾರ್ಲಿಮೆಂಟ್ ಎಲೆಕ್ಷನ್, ಇದು ಎಂಎಲ್ ಎ, ನಗರಸಭೆ, ಪುರಸಭೆ, ಪಂಚಾಯಿತಿ ಚುನಾವಣೆ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ನಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ. ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದೇ ಕೇವಲ 230 ಕ್ಷೇತ್ರಗಳಲ್ಲಿ. ಅದೇಗೆ ಅಧಿಕಾರಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು.
ನೇಹಾ ಪ್ರಕರಣದಲ್ಲಿ ಮುನವಳ್ಳಿಗೆ ಮತ್ತು ನೇಹಾ ಮನೆಗೂ ಭೇಟಿ ನೀಡಿದ್ದೇನೆ. ಸಿಎಂ ಹಾಗೂ ಗೃಹಸಚಿವರು ವೈಯಕ್ತಿಕ ವಿಚಾರ ಎಂದಿದ್ದಕ್ಕೆ ಕುಟುಂಬದ ಮರ್ಯಾದೆ ಕಳೆದರು ಎಂದು ನೇಹಾ ತಂದೆ ಸರಿಯಾಗಿ ಜಾಡಿಸಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಸರ್ಕಾರ ತೊಡಗಿದೆ. ಕೂಡಲೇ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವನ ಹೇಳಬೇಕಿತ್ತು. ಅದನ್ನು ಮಾಡದೇ ಈಗ ಮನೆಗೆ ಭೇಟಿ ನೀಡಿ ತಪ್ಪಾಯ್ತು ಎಂದು ಹೇಳುವುದು ಎಷ್ಟು ಸರಿ ಎಂದು ಶೆಟ್ಟರ್ ಪ್ರಶ್ನಿಸಿದರು.