ಬೆಳಗಾವಿ:"ಕಳೆದ ಒಂಬತ್ತು ವರ್ಷಗಳಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿಯನ್ನೇ ಮೂಲ ಮಂತ್ರ ಮಾಡಿಕೊಂಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯಲ್ಲಿ ದೇಶ ದಾಪುಗಾಲಿಡುತ್ತಿದೆ. ಹೀಗಾಗಿ ಭಾರತ 2028ರ ವೇಳೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ 3ನೇ ಸ್ಥಾನ ಹೊಂದಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ಧ ಪ್ರಬುದ್ಧರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಡ್ಡಾ, "ದೇಶದ ಲಕ್ಷಗಟ್ಟಲೆ ಹಳ್ಳಿಗಳಿಗೆ ನೀರು, ವಿದ್ಯುತ್ ಮತ್ತು ಮನೆಗಳ ವ್ಯವಸ್ಥೆಯನ್ನು ಮೋದೀಜಿ ಮಾಡಿಕೊಟ್ಟಿದ್ದಾರೆ. ಹಿಂದೆ ಈ ಮೂಲಸೌಕರ್ಯಗಳು ಕೇವಲ ಕನಸಾಗಿದ್ದವು. 2014ರಲ್ಲಿ ಬಿಜೆಪಿ ದೇಶದ ಅಧಿಕಾರವಹಿಸಿಕೊಂಡಾಗ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಕೇವಲ ಒಂದು ಸಾವಿರ ದಿನಗಳಲ್ಲಿ ಈ ಸೌಕರ್ಯ ನೀಡುವುದಾಗಿ ತಿಳಿಸಿದ ಮೋದಿ, ಅದನ್ನು ಸಕಾಲದಲ್ಲಿ ಈಡೇರಿಸಿದರು" ಎಂದರು.
"ಇಂದು ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಜಲ್ ಜೀವನ್ ಯೋಜನೆಯಡಿ 11 ಕೋಟಿ ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿ ಗ್ಯಾಸ್ ಸಿಲಿಂಡರ್ ಸೌಲಭ್ಯ ಒದಗಿಸಲಾಗಿದೆ" ಎಂದು ನಡ್ಡಾ ವಿವರಿಸಿದರು.
"ಇಂಡಿಯಾ ಒಕ್ಕೂಟದಲ್ಲಿರುವ ನಾಯಕರಲ್ಲಿ ಹಲವರು ಜೈಲಿನಲ್ಲಿದ್ದಾರೆ ಅಥವಾ ಜಾಮೀನು ಮೇಲಿದ್ದಾರೆ. ಅಖಿಲೇಶ್ ಯಾದವ್, ಅಬ್ದುಲ್ಲಾ ಮೊಹಮ್ಮದ್ ಮಫ್ತಿ, ಲಾಲೂಪ್ರಸಾದ್, ತೇಜಪ್ರತಾಪ್, ಎಂ.ಕೆ.ಸ್ಟಾಲಿನ್, ಷರದ್ ಪವಾರ್, ರಾಹುಲ್ ಗಾಂಧಿ, ಕೇಜ್ರಿವಾಲ್ ಈ ನಾಯಕರ ಪಟ್ಟಿಯನ್ನು ಗಮನಿಸಿ. ಎಲ್ಲರೂ ತಮ್ಮ ಒಂದಿಲ್ಲೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ" ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, "ಸೂರ್ಯ-ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ ಕೇಂದ್ರದಲ್ಲಿ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ" ಎಂದರು.
ಕಾರ್ಯಕ್ರಮದಲ್ಲಿ ಪ್ರಬುದ್ಧರ ಜೊತೆಗೆ ಸಂವಾದದಲ್ಲಿ ಪಾಲ್ಗೊಳ್ಳಬೇಕಿದ್ದ ಜೆ.ಪಿ.ನಡ್ಡಾ ಕೇವಲ ಭಾಷಣ ಮಾಡಿದ್ದು, ಚರ್ಚೆಗೆ ಗ್ರಾಸವಾಯಿತು. ತಮ್ಮ ಸಲಹೆಗಳನ್ನು ನೀಡಲು ಆಗಮಿಸಿದ್ದ ಪ್ರಬುದ್ಧರು ಭಾಷಣ ಕೇಳಿ ವಾಪಸಾದರು.