ಕರ್ನಾಟಕ

karnataka

ETV Bharat / state

ನನ್ನ ಅಭಿಪ್ರಾಯದಲ್ಲಿ ಬೆಂಗಳೂರು ಮೂರು ಭಾಗಗಳಾಗಿ ಮಾಡಿದ್ರೆ ಅನುಕೂಲ : ಜಮೀರ್ ಅಹಮದ್​ ಖಾನ್ - MINISTER ZAMEER AHMED KHAN

ಬೆಂಗಳೂರನ್ನ ಮೂರು ಭಾಗಗಳಾಗಿ ಮಾಡಿದ್ರೆ ಅಭಿವೃದ್ಧಿ ಕೆಲಸಕ್ಕೆ ಅನುಕೂಲ ಎಂದು ಸಚಿವ ಜಮೀರ್ ಅಹಮದ್​ ಖಾನ್ ಹೇಳಿದ್ದಾರೆ.

Minister-zameer-ahmed-khan
ಸಚಿವ ಜಮೀರ್ ಅಹಮದ್​ ಖಾನ್ (ETV Bharat)

By ETV Bharat Karnataka Team

Published : Feb 25, 2025, 7:57 PM IST

ಶಿವಮೊಗ್ಗ : ಬೆಂಗಳೂರು ದಿನೆ ದಿನೆ ಬೆಳೆಯುತ್ತಿದ್ದು, ಆಡಳಿತಾತ್ಮಕವಾಗಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಎಂದು ಮೂರು ಭಾಗಗಳಾಗಿ ಮಾಡಿದ್ರೆ ಅಭಿವೃದ್ಧಿ ಕೆಲಸಕ್ಕೆ ಅನುಕೂಲ ಎಂದು ವಸತಿ ಹಾಗೂ ವಕ್ಫ್​ ಖಾತೆ ಸಚಿವ ಜಮೀರ್ ಅಹಮದ್ ಖಾನ್​​ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಈಗ ಆನೇಕಲ್​​ವರೆಗೂ ಸೇರಿದೆ. ಈ ಕಡೆ ಸರ್ಜಾಪುರದವರೆಗೂ ಬೆಳೆದಿದೆ. ಬೇರೆ ಬೇರೆಯವರು ಅಭಿಪ್ರಾಯ ತಿಳಿಸುತ್ತಾರೆ, ನನ್ನ ಅಭಿಪ್ರಾಯದಲ್ಲಿ ಬೆಂಗಳೂರಿನಲ್ಲಿ ಒಬ್ಬ ಕಮಿಷನರ್​ ಇದ್ರೆ ಅಲ್ಲಿ ಮೆಂಟೆನೆಸ್ಸ್​ ಸಾಧ್ಯವಾಗಲ್ಲ. ಮೂವರು ಮೇಯರ್ ಹಾಗೂ ಮೂವರು ಕಮಿಷನರ್ ಮಾಡಿದ್ರೆ ಕೆಲಸ ಮಾಡಲು ಅನುಕೂಲವಾಗುತ್ತೆ ಎಂದು ಹೇಳಿದರು.

ಸಚಿವ ಜಮೀರ್ ಅಹಮದ್​ ಖಾನ್ ಮಾತನಾಡಿದರು (ETV Bharat)

ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದರ ಪಾತ್ರದ ಕುರಿತು ಲೋಕಾಯುಕ್ತ ಆದೇಶವಾಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈಗ ಅವರು ಲೋಕಸಭಾ ಸದಸ್ಯರಿದ್ದಾರೆ. ಆದರೆ, ಅವರು ಹಿಂದೆ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಈಗ ಅವರನ್ನು ಇಡಿ ಹಾಗೂ ಲೋಕಾಯುಕ್ತದವರು ತನಿಖೆ ನಡೆಸಿದ್ದಾರೆ ಎಂದರು.

ಇನ್ನು ಮಂತ್ರಿ ಮಂಡಲದ ವಿಸ್ತರಣೆಯ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ‌. ನಾವು ಹೈಕಮಾಂಡ್ ಗೆರೆಯನ್ನು ದಾಟುವುದಿಲ್ಲ ಎಂದರು.

ನಾನು ಅಲ್ಪಸಂಖ್ಯಾತರ ಹಾಸ್ಟೆಲ್​ಗೆ ಭೇಟಿ ನೀಡಿದ್ದೆ. ಇಲ್ಲಿ ಕಡು ಬಡವರ ಮಕ್ಕಳು ಓದುತ್ತಿರುತ್ತಾರೆ. ಅಲ್ಲಿ ಮನೆಯಲ್ಲಿ ಕಷ್ಟ ಎಂದು ಬಂದು ಇಲ್ಲಿ ಓದುತ್ತಿರುತ್ತಾರೆ. ಇದರಿಂದ ಅವರಿಗೆ ಉತ್ತಮವಾದ ಊಟ, ತಿಂಡಿ ವಸತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಘಟನೆಯನ್ನು ಖಂಡಿಸಿದ ಸಚಿವ ಜಮೀರ್​ ಅಹ್ಮದ್, ಇಂತಹ ಘಟನೆ ನಡೆಯಬಾರದು ಎಂದರು.

ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ ಅವರು ಈ ಹಿಂದೆ ಎರಡು ಬಾರಿ ಸಿಎಂ ಆಗಿ ಏನ್ ಮಾಡಿದ್ರು, ಅದೇ ಸಿದ್ದರಾಮಯ್ಯನವರು ಸಿಎಂ ಆಗಿ ಗ್ಯಾರಂಟಿಗಳಿಗಾಗಿಯೇ 50 ರಿಂದ 60 ಸಾವಿರ ಕೋಟಿ ರೂ. ಕೊಡುತ್ತಿದ್ದಾರೆ. ಬಡವರ ಬಗ್ಗೆ ಕಾಳಜಿ ಇದ್ದಿದ್ದಕ್ಕೆ 9,500 ಕೋಟಿ ರೂ. ನೀಡಿದ್ದಾರೆ. ಸ್ಲಂ ಪ್ರದೇಶಗಳಲ್ಲಿನ ಮನೆಗಳಿಗೆ 1,83,000 ಕೋಟಿ, 253 ಲಕ್ಷ ಮನೆಗಳಿಗೆ 7,400 ಕೋಟಿ, 860 ಮನೆಗಳಿಗೆ 2,100 ಕೋಟಿ ರೂ. ನೀಡಿದ್ದಾರೆ ಎಂದು ಹೇಳಿದರು.

ನಮ್ಮ ಸರ್ಕಾರಕ್ಕೆ ಎಷ್ಟೇ ಕಷ್ಟ ಆಗಿದ್ರೂ ಸಹ ಬಡವರಿಗೆ ಮನೆ ನೀಡಬೇಕೆಂದು ಹಣ ಬಿಡುಗಡೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬಡವರ ಬಗ್ಗೆ ಕಾಳಜಿ ಇದ್ರೆ ಮಾಡಬೇಕಿತ್ತು. ಕುಮಾರಸ್ವಾಮಿ ಅವರು ಒಮ್ಮೆ ರೈತರ ಸಾಲ ಮನ್ನಾ ಮಾಡಿ, ಅದನ್ನೇ ಹೇಳುತ್ತಿದ್ದಾರೆ.‌ ಅವರು ಇಂತಹ ಯೋಜನೆಗಳನ್ನ ಕೊಟ್ಟಿದ್ದೇವೆ ಎಂದು ತೋರಿಸಲಿ, ನಾವು ಸಿದ್ದರಾಮಯ್ಯ ಅವರು ಕೊಟ್ಟಿರುವ ಭಾಗ್ಯಗಳು ಹಾಗೂ ಕಾರ್ಯಕ್ರಮಗಳನ್ನ ತೋರಿಸುತ್ತೇವೆ ಎಂದು ಜಮೀರ್​ಅಹ್ಮದ್​ ಸವಾಲು ಹಾಕಿದರು.

ವಿರೋಧ ಪಕ್ಷದವರು ಇದು ರಾಜಕೀಯ ಭಾಷಣ ಎಂದು ಹೇಳುತ್ತಿದ್ದರು. ಆದ್ರೂ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಾವು ಚುನಾವಣೆ ವೇಳೆ ಹೇಳದೆ ಇದ್ರು ಸಹ ಬಡವರಿಗೆ ಸೂರು ಸಿಗಬೇಕೆಂದು 9,500 ಕೋಟಿ ರೂ.ಯನ್ನು ಮನೆಗಳಿಗೆಗಾಗಿಯೇ ನೀಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಯ ಕುರಿತು ಗೃಹ ಸಚಿವ ಪರಮೇಶ್ವರ್ ಹೇಳುತ್ತಿರುವುದು ಅರ್ಹರಿಗೆ ಮಾತ್ರ ಯೋಜನೆ ತಲುಪಬೇಕೆಂದು. ನಾವು ಸಹ ಅದನ್ನೇ ಹೇಳುತ್ತಿದ್ದೇವೆ.‌ ಆಶ್ರಯ ಮನೆ ವಿತರಣೆ ಮಾಡಲು ಯಾರಾದರೂ ಹಣ ಪಡೆದುಕೊಂಡಿರುವ ಕುರಿತು ನನಗೆ ಮಾಹಿತಿ ಬಂದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಗ್ರೇಟರ್ ಬೆಂಗಳೂರು ಮಸೂದೆ ವರದಿ ಸಲ್ಲಿಕೆ : 7 ಪಾಲಿಕೆ ರಚನೆ, 30 ತಿಂಗಳ ಮೇಯರ್ ಅವಧಿಗೆ ಸಲಹೆ

ಇದನ್ನೂ ಓದಿ:ಗೃಹ ಜ್ಯೋತಿಯ ಹಣ ಎಸ್ಕಾಂಗಳಿಗೆ ಮುಂಗಡ ಪಾವತಿ, ಗ್ರಾಹಕರಿಂದ ಪಡೆಯುವ ಪ್ರಸ್ತಾಪವಿಲ್ಲ:ಕೆ.ಜೆ.ಜಾರ್ಜ್‌ - GRUHA JYOTHI

ABOUT THE AUTHOR

...view details