ಧಾರವಾಡ: ಪ್ರಹ್ಲಾದ್ ಜೋಶಿಯವರನ್ನು ಧಾರವಾಡ ಕ್ಷೇತ್ರದಿಂದ ಬದಲಾಯಿಸಬೇಕು ಎಂದು ಎಲ್ಲ ಮುಖಂಡರು ಭಾಗಿಯಾಗಿ ಸಭೆ ಕರೆದಾಗ ಕೆಲವರು ಬದಲಾವಣೆ ಬೇಡ ಎಂದರು. ಆದರೆ, ನಾವು ಯಾವುದೇ ಒತ್ತಡ, ಆಮಿಷಕ್ಕೆ ಮಣಿಯುವುದಿಲ್ಲ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಭಕ್ತರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಅವರೆಲ್ಲರೂ ಸೇರಿ ಒಂದು ತೀರ್ಮಾನ ಮಾಡಿದ್ದಾರೆ. ನಾನು ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಎಂದಿದ್ದಾರೆ. ಮಠಗಳು ಬದಲಾಗಿವೆ. ಎಲ್ಲರೂ ಸಹ ನನಗೆ ಕರೆ ಮಾಡಿ ಮುಂದಿಟ್ಟ ಹೆಜ್ಜೆ ಹಿಂದಿಡದಂತೆ ಹೇಳಿದ್ದಾರೆ. ಯಾವುದೇ ಪಕ್ಷದ ವಿಚಾರ, ಜಾತಿ ವಿಚಾರ ನಮ್ಮಲ್ಲಿಲ್ಲ ಎಂದರು.
ನನ್ನ ಹಿಂದೆ ಪ್ರಮುಖರು ಇದ್ದಾರೆ. ಅತೀ ಶೀಘ್ರದಲ್ಲೇ ಬೆಂಗಳೂರಿನಲ್ಲಿ ನನ್ನ ತೀರ್ಮಾನ ಹೇಳುತ್ತೇನೆ. ನಮ್ಮ ಗುರುಗಳ ಮತ್ತು ಭಕ್ತರ ನಿರ್ಣಯ ಪಡೆದು ವಿಚಾರ ತಿಳಿಸುತ್ತೇನೆ. ಜೋಶಿಯವರನ್ನು ಪರಾಭವಗೊಳಿಸುವುರದಲ್ಲಿ ಎರಡು ಮಾತಿಲ್ಲ. ಧಾರವಾಡದ ಲೋಕಸಭೆ ಚುನಾವಣೆಯ ಸಲುವಾಗಿ ಸಮಿತಿ ರಚಿಸಲಾಗಿದೆ. ಮುರುಘಾ ಶ್ರೀಗಳು ಎಲ್ಲ ಸಭೆ, ಚರ್ಚೆಗಳಿಗೆ ನಮ್ಮ ಜತೆ ಇದ್ರು. ಆದರೆ ಕೆಲವರು ಮಠಕ್ಕೆ ಹೋಗಿ ಹೆದರಿಸಿ ಅವರಿಗೆ ಪತ್ರ ಓದಿಸಿದ್ದಾರೆ. ಕೇವಲ ಚುನಾವಣೆಗೆ ಮಾತ್ರ ಕರೆ ಮಾಡಿ ಆಶೀರ್ವಾದ ಮಾಡಿ ಅಂತ ಜೋಶಿ ಹೇಳುತ್ತಾರೆ. ನಾನು ಆಗ ಕೇವಲ ನಮ್ಮನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ ಅಂತ ಪ್ರಶ್ನೆ ಮಾಡಿದ್ದೆ. ಆಗ ಈ ಬಾರಿ ಮಾತ್ರ ಕ್ಷಮಿಸಿ ಮುಂದೆ ಹೀಗಾಗಲ್ಲ ಅಂತ ಹೇಳಿದ್ರು. ಆದರೆ ಮಠಗಳಿಗೆ ಅನುದಾನ ಸಿಕ್ಕಿಲ್ಲ. ಉತ್ತರ ಭಾರತದಲ್ಲಿ 50 ಜನ ಸನ್ಯಾಸಿಗಳು ಸಂಸದರಾಗಿದ್ದಾರೆ. ನಮ್ಮ ಹೋರಾಟ ಜೋಶಿ ವಿರುದ್ಧ ಅಲ್ಲ, ಅವರ ವ್ಯಕ್ತಿತ್ವ, ನುಡಿಯ ಬಗ್ಗೆ ಮಾತ್ರ ಎಂದು ತಿಳಿಸಿದರು.