ಕರ್ನಾಟಕ

karnataka

ETV Bharat / state

ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಬಂದಿದ್ದು ನಿಜ: ಸಂಸದ ಜಿ.ಕುಮಾರ್​ ನಾಯ್ಕ್​ - MP KUMAR NAIK

ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ವಿವರವಾಗಿ ಉತ್ತರ ನೀಡಿದ್ದೇನೆ ಎಂದು ಕಾಂಗ್ರೆಸ್ ಸಂಸದ ಜಿ.ಕುಮಾರ್​ ನಾಯ್ಕ್​ ತಿಳಿಸಿದರು.

MP Kumar Naik
ಸಂಸದ ಕುಮಾರ್​ ನಾಯಕ್​ (ETV Bharat)

By ETV Bharat Karnataka Team

Published : Oct 24, 2024, 4:35 PM IST

Updated : Oct 24, 2024, 7:04 PM IST

ರಾಯಚೂರು:"ಮುಡಾ ಹಗರಣ ವಿಚಾರವಾಗಿ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಬಂದಿದ್ದು ನಿಜ" ಎಂದು ರಾಯಚೂರಿನ ಕಾಂಗ್ರೆಸ್ ಸಂಸದ ಹಾಗು ಮೈಸೂರಿನ ಮಾಜಿ ಜಿಲ್ಲಾಧಿಕಾರಿ ಜಿ.ಕುಮಾರ್ ನಾಯ್ಕ್ ತಿಳಿಸಿದರು.

ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "2002-2005ರವರೆಗೆ ಅಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದೆ. ದೂರಿನಲ್ಲಿ 2005ರ ಕೊನೆಯಲ್ಲಿ ಕನ್ವರ್ಷನ್​ ಮಾಡುವ ಸಮಯದಲ್ಲಿ ಆಗಿನ ಜಿಲ್ಲಾಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಬಿಂಬಿಸಿದ್ದಾರೆ. ದೂರು ಕೊಟ್ಟಿರುವವರಿಗೆ ಕಾನೂನಿನ ಎಲ್ಲ ಆಯಾಮಗಳ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ವಿವರವಾಗಿ ವಿಚಾರಣೆ ವೇಳೆ ಹೇಳಿದ್ದೇನೆ. ನಾನು ತಪ್ಪು ಮಾಡಿಲ್ಲ. ಭೂ ಪರಿವರ್ತನೆ ಕಾನೂನು ಪಾಲನೆ ಮಾಡಿಕೊಂಡೇ ಎಲ್ಲವನ್ನೂ ಮಾಡಿದ್ದೇನೆ. 1997-98ರಲ್ಲಿ ಭೂಮಿ ನೋಟಿಫಿಕೇಶನ್ ಆಗಿತ್ತು. ಬಳಿಕ ಅದರಲ್ಲಿ ಪ್ರಾಥಮಿಕ ಡಿನೋಟಿಫಿಕೇಶನ್ ಆಗಿ ಅದರ ಬಗ್ಗೆ ತನಿಖೆ ಆಗಿತ್ತು. ತನಿಖೆ ಬಳಿಕ ಫೈನಲ್ ನೋಟಿಫಿಕೇಶನ್ ಆಗಿತ್ತು. ನಂತರ ಅವಾರ್ಡ್(ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡೊವಂತದ್ದು) ಪಾಸ್ ಆಗಿತ್ತು" ಎಂದು ತಿಳಿಸಿದರು.

ಸಂಸದ ಜಿ.ಕುಮಾರ್​ ನಾಯ್ಕ್​ (ETV Bharat)

"ಇದಾದ ಬಳಿಕ 45 ದಿನಗಳೊಳಗಾಗಿ ಅವರು ಸರ್ಕಾರಕ್ಕೆ ಮನವಿ ಕೊಟ್ಟು, ತಮ್ಮ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿಸಿಕೊಂಡಿದ್ದರು. 1998ರಲ್ಲಿ ಆಗ ಭೂಸ್ವಾಧೀನ ಪ್ರಕ್ರಿಯಿಯೆಯಿಂದ ಕೈಬಿಡಲಾಗಿತ್ತು. ಬಳಿಕ ನೇರವಾಗಿ ರೈತನಿಗೆ ವಾಪಸ್ ಹೋಗಿತ್ತು. ನಂತರ ಆರು ವರ್ಷಗಳ ಬಳಿಕ ಕೈ ಬದಲಾವಣೆ ಆಗಿ ಆ ಭೂಮಿ ಖರೀದಿಸಿರುವವರು ಭೂಮಿ ಪರಿವರ್ತನೆ ಮಾಡಿ ಎಂದು ಅರ್ಜಿ ಕೊಟ್ಟಿದ್ದಾರೆ" ಎಂದರು.

"ಈ ರೀತಿ ಎಲ್ಲ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮಾಡುವ ಸಹಜ ಪ್ರಕ್ರಿಯೆ ಅದು. ಮೊನ್ನೆ ವಿಚಾರಣೆ ವೇಳೆ ಆ ಹಳೆ ಕಡತ ನೋಡಿದ್ದೇನೆ. ಆ ಪ್ರಕ್ರಿಯೆ ಮಾಡಲು ಆಗ 120-150 ದಿನಗಳನ್ನು ತೆಗೆದುಕೊಂಡಿದ್ದೇವೆ. ಆ ವೇಳೆ ನಮಗೆ ಯಾವುದೇ ಒತ್ತಡ ಇರಲಿಲ್ಲ ಎನ್ನುವುದನ್ನು ಲೋಕಾಯುಕ್ತರ ಎದುರು ಹೇಳಿದ್ದೇನೆ" ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ಹಾಗೂ ರಾಯಚೂರು ಲೋಕಸಭಾ ಚುನಾವಣೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿಕೊಳ್ಳಲಾಗಿದೆ ಎನ್ನುವ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, "ನಿರಾಧಾರ ಆರೋಪಗಳಿಗೆ ಅರ್ಥವೇ ಇಲ್ಲ. ಈಗಾಗಲೇ ಕೇಂದ್ರ ಏಜೆನ್ಸಿಗಳು ತನಿಖೆ ಮಾಡುತ್ತಿವೆ. ಅವರು ಪರಿಶೀಲಿಸಲಿ. ಸುಮ್ಮನೆ ಬುಡಕಟ್ಟಿನ ನಿಗಮದಲ್ಲಿ ಆಗಿರುವ ಪ್ರಕರಣ ಅಂತ, ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಸದನ ವಿರುದ್ಧ ಆರೋಪ ಮಾಡುತ್ತಿರುವುದು ಅತ್ಯಂತ ಶೋಚನೀಯ ಹಾಗೂ ಅಮಾನವೀಯ" ಎಂದು ತಳ್ಳಿ ಹಾಕಿದರು.

ಸಂಸದ ಕುಮಾರ್ ನಾಯ್ಕ್ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಸುಮಾರು 1.30 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಮೈಸೂರು: ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾದ ಮುಡಾ ಮಾಜಿ ಆಯುಕ್ತ ಪಾಲಯ್ಯ

Last Updated : Oct 24, 2024, 7:04 PM IST

ABOUT THE AUTHOR

...view details