ಶಿವಮೊಗ್ಗ:ಮೈಸೂರು ದಸರಾ ನೋಡಲು ಎಷ್ಟು ಚೆಂದವೊ ಅದೇ ರೀತಿ ಶಿವಮೊಗ್ಗದ ದಸರಾ ಸಹ ಸುಂದರವಾಗಿರುತ್ತದೆ. ಮೈಸೂರಿನಂತೆ ಶಿವಮೊಗ್ಗದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಆನೆ ಮೇಲೆ ಅಂಬಾರಿಯಲ್ಲಿ ಮೆರವಣಿಗೆ ಮಾಡುತ್ತಾರೆ. ಇದಕ್ಕಾಗಿ ಶಿವಮೊಗ್ಗ ತಾಲೂಕು ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನು ತಂದು ಅವುಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ, ಈ ಬಾರಿ ದಸರಾದಲ್ಲಿ ಆನೆ ಅಂಬಾರಿ ಹೊರುವುದು ಅನುಮಾನವಾಗಿದೆ.
ಕಳೆದ 10 ವರ್ಷಗಳಿಂದ ಸಾಗರ ಎಂಬ ಗಂಡಾನೆ ಸಾಗರ ಹೊರುತ್ತಿದೆ. ಸಾಗರನಿಗೆ ಸಾಥ್ ನೀಡಲು ಎರಡು ಹೆಣ್ಣಾನೆಗಳನ್ನು ತರಲಾಗುತ್ತದೆ. ಗಂಡಾನೆಯನ್ನು ನಿಯಂತ್ರಿಸಲು ಹೆಣ್ಣಾನೆಗಳು ಬೇಕೇ ಬೇಕು. ಮೆರವಣಿಗೆ ಸರಾಗವಾಗಿ ನಡೆಯುತ್ತದೆ. ಗಂಡಾನೆ ಒಂದೇ ಅದರೆ ಅದನ್ನು ನಿಯಂತ್ರಿಸಲು ಅಸಾಧ್ಯ ಎಂದು ಹೆಸರು ಹೇಳಲು ಇಚ್ಛಿಸದ ಮಾವುತರು ಹೇಳುತ್ತಾರೆ.
ಬಾಣಂತನದಲ್ಲಿರುವ ಸಕ್ರೆಬೈಲಿನ ಹೆಣ್ಣಾನೆಗಳು:ಪ್ರತಿ ವರ್ಷ ಸಾಗರನಿಗೆ ಸಾಥ್ ನೀಡಲು ನೇತ್ರಾವತಿ ಹಾಗೂ ಭಾನುಮತಿ ಎಂಬ ಹೆಣ್ಣಾನೆಗಳು ಬರುತ್ತಿದ್ದವು. ಆದರೆ ಈ ಬಾರಿ ಇವರೆಡು ಆನೆಗಳು ಮರಿಗೆ ಜನ್ಮ ನೀಡಿದ್ದು, ಬಾಣಂತನದಲ್ಲಿವೆ. ಹಿರಿಯ ಆನೆ ಕುಂತಿ ಸಹ ಮರಿ ಹಾಕಿದೆ. ಹೆಣ್ಣಾನೆಗಳು ಬರುವುದು ಅನುಮಾನವಾಗಿವೆ. ಹಾಗಾಗಿ ದಸರಾದಲ್ಲಿ ಸಾಗರ ಆನೆ ಅಂಬಾರಿ ಹೊರುವುದು ಇನ್ನೂ ಅನಿಶ್ಚಿತತೆಯಿಂದ ಕೊಡಿದೆ.
ಪ್ರತಿ ಬಾರಿ ದಸರಾವು ಅಂಬಾರಿಯಿಂದ ಕಳೆ ಕಟ್ಟುತ್ತಿತ್ತು. ಸಾಗರ ಆನೆಗೆ ಸಕ್ರೆಬೈಲಿನಲ್ಲಿ ವಾಕಿಂಗ್ ಹಾಗೂ ಅಂಬಾರಿಯಷ್ಟೇ ಭಾರದ ಮರಳಿನ ಚೀಲ ಹಾಕಿ ತರಬೇತಿ ನೀಡಲಾಗುತ್ತಿತ್ತು. ಅಲ್ಲದೆ ಶಿವಮೊಗ್ಗಕ್ಕೆ ಮೂರು ದಿನ ಮುಂಚೆಯೇ ಕರೆತಂದು ನಗರದಲ್ಲಿ ವಾಕಿಂಗ್ ಹಾಗೂ ಭಾರದ ತರಬೇತಿ ನೀಡಲಾಗುತ್ತಿತ್ತು.
ಮಹಾನಗರ ಪಾಲಿಕೆಯಿಂದ ಆನೆಗೆ ಬೇಡಿಕೆ:ದಸರಾವನ್ನು ಪ್ರತಿ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಪಾಲಿಕೆಯಲ್ಲಿ ಬಜೆಟ್ ಸಹ ಇಡಲಾಗುತ್ತದೆ. ಈ ಬಾರಿ ಪಾಲಿಕೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ 1.50 ಕೋಟಿ ರೂ. ಬಿಡುಗಡೆಗೆ ಸಮ್ಮತಿ ಸೂಚಿಸಿದೆ. ಇದರ ಜೊತೆಗೆ ಆನೆಗಳಿಗೂ ಸಹ ಪಾಲಿಕೆ ಬೇಡಿಕೆ ಇಟ್ಟಿದೆ. ಈ ಕುರಿತು ಅರಣ್ಯ ಸಚಿವರ ಕಚೇರಿಯಿಂದ ಜಿಲ್ಲೆಯ ಸಿಸಿಎಫ್ಗೆ ಪತ್ರ ಬರೆದಿದ್ದು, ಅವರು ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನ ಪಟಗಾರ್ ಅವರಿಗೆ ಪತ್ರ ಬರೆದು ಆನೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.