ಕರ್ನಾಟಕ

karnataka

ETV Bharat / state

ಗಂಗಾವಳಿಯಲ್ಲಿ ಶೋಧಕ್ಕೆ ಅಧಿಕಾರಿಗಳ ನಿರಾಕರಣೆ ; ವಾಪಸ್​ ತೆರಳಿದ ಈಶ್ವರ್ ಮಲ್ಪೆ ತಂಡ - ISHWAR MALPE TEAM - ISHWAR MALPE TEAM

ಗಂಗಾವಳಿ ನದಿಯಲ್ಲಿ ಅಮಾವಾಸ್ಯೆ ದಿನ ಲಾರಿ ಪತ್ತೆಗೆ ಆಗಮಿಸಿದ್ದ ಈಜು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ನೀರಿಗಿಳಿಯಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಹೀಗಾಗಿ ತಂಡ ಹಿಂತಿರುಗಿದೆ.

ishwar-malpe
ಈಶ್ವರ ಮಲ್ಪೆ (ETV Bharat)

By ETV Bharat Karnataka Team

Published : Aug 4, 2024, 7:07 PM IST

ಈಜು ತಜ್ಞ ಈಶ್ವರ್ ಮಲ್ಪೆ (ETV Bharat)

ಕಾರವಾರ (ಉತ್ತರ ಕನ್ನಡ) :ಅಂಕೋಲಾದ ಶಿರೂರಿನ ಬಳಿ ಗಂಗಾವಳಿ ನದಿಯಲ್ಲಿ ಅಮಾವಾಸ್ಯೆ ದಿನ ಲಾರಿ ಪತ್ತೆ ಕಾರ್ಯಾಚರಣೆಗೆ ಆಗಮಿಸಿದ್ದ ಉಡುಪಿಯ ಈಜು ತಜ್ಞ ಈಶ್ವರ್​ ಮಲ್ಪೆ ತಂಡಕ್ಕೆ ನೀರಿಗಿಳಿಯಲು ಅಧಿಕಾರಿಗಳು ನಿರಾಕರಣೆ ಮಾಡಿದ್ದು, ತಂಡ ವಾಪಸ್​ ತೆರಳಿದೆ.

ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದ ಲಾರಿ ಹಾಗೂ ಇನ್ನು ಮೂವರಿಗಾಗಿ ಹುಡುಕಾಟ ನಡೆಸುವ ಸಂಬಂಧ ಈ ಹಿಂದೆ ತಿಳಿಸಿದಂತೆ ಈಶ್ವರ್​ ಮಲ್ಪೆ ತಂಡದ ಸದಸ್ಯರು, ಗಂಗಾವಳಿ ನದಿಯಲ್ಲಿ ಅಮಾವಾಸ್ಯೆ ದಿನ ಕಾರ್ಯಾಚರಣೆ ನಡೆಸಲು ಆಗಮಿಸಿದ್ದರು.

ಸಾಮಾನ್ಯವಾಗಿ ಅಮಾವಾಸ್ಯೆ ದಿನ ನೀರು ಇಳಿತವಿರುವ ಕಾರಣ ಆ ಎರಡು ಗಂಟೆಗಳಲ್ಲಿ ಹೆಚ್ಚಿನ ಆಳಕ್ಕೆ ತೆರಳಿ ಹುಡುಕಾಟ ನಡೆಸಲು ಮುಂದಾಗಿದ್ದವರಿಗೆ ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರಿದಿದ್ದು, ಗಂಗಾವಳಿ ನದಿ ಕೂಡ ತುಂಬಿ ಹರಿಯಲಾರಂಭಿಸಿದೆ.

ಅಲ್ಲದೆ ನೀರು ಕೂಡ ಕೆಂಪಾಗಿರುವ ಕಾರಣ ಕಾರ್ಯಾಚರಣೆಗೆ ಇಳಿದಲ್ಲಿ ಅವರೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸರು ನದಿಯಲ್ಲಿ ಮುಳುಗಲು ಅವಕಾಶ ನೀಡಿಲ್ಲ. ಇದರಿಂದ ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಮಾಡಿ ಅರ್ಜುನ್ ಲಾರಿಯನ್ನು ಹುಡುಕಾಡುವ ಉದ್ದೇಶದಿಂದ ಸ್ಥಳೀಯರೊಂದಿಗೆ ಆಗಮಿಸಿದ್ದ ಈಶ್ವರ್ ತಂಡಕ್ಕೆ ಪೊಲೀಸರು ವಿನಂತಿಸಿ, ಇಳಿಯದಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರ್ ಮಲ್ಪೆ, ''ಗಂಗಾವಳಿ ನದಿಯಲ್ಲಿ ಕೆಂಪು ನೀರು ಇದ್ದು, ಮಳೆ ಕೂಡ ಜೋರಾಗಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಅಧಿಕಾರಿಗಳು ಹಾಗೂ ಪೊಲೀಸರು ನದಿಗೆ ಇಳಿಯಲು ಅನುಮತಿ ನೀಡಿಲ್ಲ. ಅವರು ಹೇಳಿದಂತೆ ಮಳೆ ಜೋರಾಗಿರುವ ಕಾರಣ ನೀರು ರಭಸವಾಗಿ ಹರಿಯುತ್ತಿದ್ದು, ಕಾರ್ಯಾಚರಣೆಯಿಂದ ಅಪಾಯವಾಗುವ ಸಾಧ್ಯತೆ ಇರುವುದರಿಂದ ಅನುಮತಿ ನಿರಾಕರಿಸುತ್ತಿದ್ದಾರೆ. ಆದರೆ ಮುಂದೆ ಜಿಲ್ಲಾಡಳಿತದ ಅನುಮತಿಯೊಂದಿಗೆ ಸ್ಥಳೀಯರು ಆಹ್ವಾನಿಸಿದಾಗ ಬಂದು ಕಾರ್ಯಾಚರಣೆ ನಡೆಸುತ್ತೇವೆ'' ಎಂದು ತಿಳಿಸಿದರು.

ಇನ್ನು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಶಾಸಕ ಸತೀಶ್ ಸೈಲ್ ಕೇರಳದಿಂದ ಬಾರ್ಜ್ ಮೌಂಟೆಡ್ ಪೋಕ್ಲೈನ್ ತರಿಸಲು ಉದ್ದೇಶಿಸಿದ್ದು, ಪೋಕ್ಲೈನ್ ಬಂದ ಬಳಿಕ ಮತ್ತೆ ಬಂದು ಡೈವ್ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :ನಾಪತ್ತೆಯಾದವರ ಪತ್ತೆಗೆ ಪಟ್ಟು ಬಿಡದ ಶಾಸಕ: ಡ್ರೆಜ್ಜಿಂಗ್ ಯಂತ್ರದ ಮೂಲಕ ಮತ್ತೊಂದು ಕಾರ್ಯಾಚರಣೆ - SHIRURU HILL COLLAPSE TRAGEDY

ABOUT THE AUTHOR

...view details