ರಾಮನಗರ:ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಅದನ್ನು ಹಿಡಿದು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಚುನಾವಣೆ ಆಯೋಗಕ್ಕೆ ನಾನು ಪ್ರಶ್ನೆ ಮಾಡ್ತೇನೆ. ರಾಜ್ಯದಲ್ಲಿ ಯಾವ ರೀತಿಯ ಚುನಾವಣೆ ನಡೆತ್ತಿದೆ. 3700 ಡ್ರೆಸ್ ಮೆಟಿರಿಯಲ್, ಸೀರೆಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. 14 ಲಕ್ಷ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಎಲ್ಲಿಂದ ಬಂತು, ಯಾರಿಗೆ ಸೇರಿದ್ದು ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ’’ರಾಮನಗರದ ವಾರ್ಡ್ ನಂ.1ರ ಗೋಡೌನ್ ನಲ್ಲಿ ಸೀರೆ, ಡ್ರೆಸ್ಗಳು ಜಪ್ತಿ ಆಗಿವೆ. ಇದನ್ನು ಖರೀದಿ ಮಾಡಿರೋದು ಎನ್ ಎಂ ಗ್ರಾನೈಟ್ ಸಂಸ್ಥೆಯಾಗಿದೆ. ಈ ಎನ್ ಎಂ ಗ್ರಾನೈಟ್ ಸಂಸ್ಥೆ ಇದು ರಾಮನಗರ ಶಾಸಕರಿಗೆ ಸೇರಿದೆ. ಶಾಸಕ ಇಕ್ಬಾಲ್ ಹುಸೇನ್ ಎನ್ ಎಂ ಗ್ರಾನೈಟ್ ಮಾಲೀಕರು. ಅವರ ಕಂಪನಿ ಹೆಸರಿನಲ್ಲಿ ಬುಕ್ ಮಾಡಿರೋ ಸೀರೆಯಾಗಿದೆ‘‘ಎಂದು ಆರೋಪಿಸಿದರು.
ದಾಖಲೆ ಸಮೇತ ಪೋಟೊ ಬಿಡುಗಡೆ ಮಾಡಿದ ಅವರು, 15-20 ದಿನದಿಂದ ಕುಕ್ಕರ್,ಸೀರೆಗಳನ್ನು ಹಂಚಲಾಗುತ್ತಿದೆ. ಮಾಹಿತಿ ನೀಡಿದರೂ ಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನ್ಮಾಡ್ತಿದೆ.ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದ್ಯಾ.? ಎಂದು ಜಿಲ್ಲಾಡಳಿತಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ರಾಜ್ಯ ಚುನಾವಣಾ ಆಯೋಗಕ್ಕೆ ನಾನು ಒತ್ತಾಯ ಮಾಡುತ್ತೇನೆ. ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಆಗ್ತಿದೆ. ಚುನಾವಣೆ ಆಯೋಗಕ್ಕೆ ಇಂದು ನಾನು ದೂರು ನೀಡುತ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಅಕ್ರಮ ಮಾಡ್ತಿದ್ದಾರೆ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುತ್ತೇನೆ ಎಂದು ಹೇಳಿದರು.
ಇನ್ನು ಡಾ.ಮಂಜುನಾಥ್ ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಬಡವರ ಪಾಲಿನ ದೇವರಾಗಿದ್ದಾರೆ. ಅಂತವರನ್ನು ಕಾಂಗ್ರೆಸ್ ಶಾಸಕರು ಟೀಕಿಸುತ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರು ಡಾ.ಮಂಜುನಾಥ್ಗೆ ರಾಜಕೀಯ ತೆವಲು ಅಂದಿದ್ದಾರೆ. ತೆವಲು ಎನ್ನುವ ಪದದ ಅರ್ಥ ಗೊತ್ತಾ ನಿಮಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಮನಗರ ಶಾಸಕರ ಪದ ಬಳಕೆಯನ್ನು ನೋಡಿದ್ದೇನೆ. ನಿಮ್ಮ ಎಲ್ಲಾ ವಿಚಾರಗಳು ನನಗೆ ಗೊತ್ತು. ನೀವು ಎಲ್ಲೆಲ್ಲಿ ಹಣ ಇಟ್ಟಿದ್ದೀರಿ ಎಂಬುದು ಗೊತ್ತು. ನಾನು ಕೂಡಾ ಇದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ನನ್ನ ಸೋಲಿಸಲು ನೀವು ಏನೇನು ಮಾಡಿದ್ರಿ ಎಲ್ಲಾ ಗೊತ್ತು. ಗಿಫ್ಟ್ ಕಾರ್ಡ್ ಕೊಟ್ಟು ಮತದಾರರನ್ನ ಯಾಮಾರಿಸಿದ್ದೀರಿ. ಮುಗ್ದ ಜನರಿಗೆ ಆಮಿಷ ತೋರಿಸಿ ಎಲೆಕ್ಷನ್ ಮಾಡಿದ್ದೀರಿ. ಈಗ ಸಂಕ್ರಾಂತಿ ಗಿಫ್ಟ್ ಅಂತ ಮಾರ್ಚ್ ತಿಂಗಳಲ್ಲಿ ಕುಕ್ಕರ್ ಹಂಚ್ತಿದ್ದೀರಿ. ಕೂಡಲೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ವಹಿಸಬೇಕು. ನೀವು ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಪಕ್ಷಾತೀತವಾಗಿ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದರು.