ಕರ್ನಾಟಕ

karnataka

ETV Bharat / state

ವಾಣಿಜ್ಯ ನಗರಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಕಣ್ಮನ ಸೆಳೆದ ಬಗೆ ಬಗೆಯ ಗಾಳಿಪಟಗಳು - ಗಾಳಿಪಟ

ಸಂಸದರ ಕ್ರೀಡಾ ಮತ್ತು ಸಾಂಸ್ಕ್ರತಿಕ ಮಹೋತ್ಸವದ ನಿಮಿತ್ತ ಹುಬ್ಬಳ್ಳಿಯಲ್ಲಿ ಎರಡು ದಿನಗಳ ವರೆಗೆ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

international-kite-festival-in-hubli
ವಾಣಿಜ್ಯ ನಗರಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಕಣ್ಮನ ಸೆಳೆದ ಬಗೆಬಗೆಯ ಗಾಳಿಪಟಗಳು

By ETV Bharat Karnataka Team

Published : Jan 27, 2024, 10:05 PM IST

Updated : Jan 27, 2024, 11:00 PM IST

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ಪ್ರಸ್ತುತ ಪಡಿಸಿರುವ ಸಂಸದರ ಕ್ರೀಡಾ ಮತ್ತು ಸಾಂಸ್ಕ್ರತಿಕ ಮಹೋತ್ಸವದ, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಗೋವಿಂದ್ ಜೋಶಿ ಹಾಗೂ ಗುರುಸಿದ್ದ ರಾಜಯೋಂಗಿದ್ರ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕೇಶ್ವಾಪುರ ಕುಸುಗಲ್ ರಸ್ತೆಯ ರೈಲ್ವೆ ಕೆಳ ಸೇತುವೆ ಬಳಿಯ ಮೈದಾನದಲ್ಲಿ ಎರಡು ದಿನಗಳ ಕಾಲ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಉತ್ಸವದಲ್ಲಿ ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಹಾಗೂ ವಿವಿಧ ರಾಜ್ಯಗಳ ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಬಣ್ಣದ ಗಾಳಿ ಪಟಗಳು ಪ್ರೇಕ್ಷಕರ ಮನಗೆದ್ದವು. ಇಂದು ಬೆಳಗ್ಗೆ ಹಾರಿಸಲಾದ ಫಿಷ್‌, ಡ್ರ್ಯಾಗನ್‌, ಡೆಲ್ಟಾ, ಇನ್‌ಪ್ಲಾಟೇಬಲ್‌, ಆಕ್ಟೋಪಸ್‌, ಲಿಫ್ಟರ್ಸ್‌, ಮಾರಿಯೋ ಸೇರಿದಂತೆ ಹಲವು ಗಾಳಿಪಟಗಳು ಕಣ್ಮನ ಸೆಳೆದವು. ದೇಶಿಯ ಗಾಳಿಪಟಗಳಲ್ಲಿ ವಿಶೇಷವಾಗಿ ಶ್ರೀರಾಮ ಗಾಳಿಪಟ ಅತ್ಯಾಕರ್ಷಕವಾಗಿತ್ತು. ಶ್ರೀರಾಮನ ಭಾವಚಿತ್ರವುಳ್ಳ ದೊಡ್ಡ ದೊಡ್ಡ ಬಲೂನ್​ಗಳು ಗಾಳಿಪಟ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು. ಅದರ ಜೊತೆಗ ಅತೀ ಚಿಕ್ಕ ಗಾಳಿಪಟಗಳಿಂದ ಹಿಡಿದು ದೊಡ್ಡ ಗಾಳಿಪಟಗಳು ಆಗಸದಲ್ಲಿ ಹಾರಾಡಿ, ನೆರೆದಿದ್ದವರನ್ನು ರಂಜಿಸಿದವು.

ವಿದೇಶ ಹಾಗೂ ಭಾರತದ ವಿವಿಧೆಡೆಯಿಂದ ಬಂದಿದ್ದ ಗಾಳಿಪಟ ಸ್ಪರ್ಧಿಗಳು ಹುಬ್ಬಳ್ಳಿ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು‌.
ಇನ್ನು ಸಾರ್ವಜನಿಕರಿಗಾಗಿ ಲಗೋರಿ, ಚಿನ್ನಿದಾಂಡು, ಗೋಣಿ ಚೀಲ ಓಟ, ಚೆಸ್‌, ಹಗ್ಗ- ಜಗ್ಗಾಟ, ಮ್ಯೂಸಿಕಲ್‌ ಚೇರ್‌ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು, ಮಹಿಳೆಯರು ಆಟದಲ್ಲಿ ಭಾಗವಹಿಸಿ ಖುಷಿಪಟ್ಟರು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ, ಬಾಲಿವುಡ್​ನ ಖ್ಯಾತ ಗಾಯಕ ಜುಬಿನ್ ನೌಟಿಯಲ್ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ. ಭಾನುವಾರವು ಹಲವು ಕಾರ್ಯಕ್ರಮಗಳು ಮುಂದುವರೆಯಲಿವೆ.

ಕ್ಷಮತಾ ಸೇವಾ ಸಂಸ್ಥೆ ಮುಖ್ಯಸ್ಥ ಗೋವಿಂದ ಜೋಶಿ ಮಾತನಾಡಿ, "ಸಂಸದರ ಕ್ರೀಡಾ ಮತ್ತು ಸಾಂಸ್ಕ್ರತಿಕ ಮಹೋತ್ಸವದ ಅಂಗವಾಗಿ ಗಾಳಿಪಟ ಉತ್ಸವ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಎರಡು ದಿನಗಳ ವರೆಗೆ ಗಾಳಿಪಟ ಉತ್ಸವ ನಡೆಯಲಿದೆ. ಸುಮಾರು 15 ದೇಶಗಳಿಂದ ಬಂದಿರುವ ಗಾಳಿಪಟ ಸ್ಪರ್ಧಿಗಳು ಗಾಳಿಪಟ ಹಾರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರು ಫೆಸ್ಟ್​​ನಲ್ಲಿ ಗಮನ ಸೆಳೆದ ಚಿತ್ರ ಸಂತೆ, ಆಹಾರ ಮೇಳ

Last Updated : Jan 27, 2024, 11:00 PM IST

ABOUT THE AUTHOR

...view details