ಬೆಂಗಳೂರು: "ಜನವರಿ 29 ರಿಂದ 31ರ ವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ 'ಗೇಮಿಂಗ್' ಮತ್ತು 'ಅನಿಮೇಷನ್' ಸಮ್ಮೇಳನ ನಡೆಯಲಿದೆ" ಎಂದು ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, "ಬೆಂಗಳೂರು ಟೆಕ್ ಸಮ್ಮಿಟ್ ಮಾದರಿಯಲ್ಲೇ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ 10 ರಾಷ್ಟ್ರಗಳಿಂದ 32 ಅಂತಾರಾಷ್ಟ್ರೀಯ ಭಾಷಣಕಾರರು ಭಾಗಿಯಾಗುತ್ತಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ" ಎಂದು ಹೇಳಿದರು.
"ನಮ್ಮ ರಾಜ್ಯ ಆಡಿಯೋ ವಿಶುವಲ್ ಎಫೆಕ್ಟ್ ಗೇಮಿಂಗ್ ಸೆಕ್ಟರ್ನಲ್ಲಿ ಅಗ್ರಸ್ಥಾನ ಪಡೆದಿದೆ. ಇಡೀ ಏಷ್ಯಾದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಎವಿಜಿಸಿ ಜಾರಿಗೆ ತಂದಿದ್ದೇವೆ. ವಿಶ್ವದಲ್ಲಿ ಕರ್ನಾಟಕದ ಅನಿಮೇಷನ್ ಸರ್ವಿಸ್ ಗೇಮಿಂಗ್ ಐಪಿ ಮೊದಲ ಸ್ಥಾನ ಪಡೆಯುವ ಲಕ್ಷಣ ಇದೆ. ಈ ಸೆಕ್ಟರ್ ನವೋದ್ಯಮ ಉತ್ತೇಜಿಸಲಿಕ್ಕೆ ಉಪಯೋಗವಾಗುತ್ತದೆ. ನಮ್ಮ ದೇಶದಲ್ಲಿ 42 ಕೋಟಿ 54 ಲಕ್ಷ ಜನ ಗೇಮರ್ಸ್ ಇದ್ದಾರೆ. ಆನ್ಲೈನ್ ಗೇಮಿಂಗ್ ಸೆಗ್ಮೆಂಟ್ ಶೇ.28 ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ 2028 ರಲ್ಲಿ ಇನ್ನೂ ಹೆಚ್ಚಾಗುತ್ತದೆ. 2025ರ ವೇಳೆಗೆ ಎರಡೂವರೆ ಲಕ್ಷ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯವಿದೆ. 430 ಕೋಟಿಯಷ್ಟು ಗೇಮ್ಗಳನ್ನು ಡೌನ್ಲೋಡ್ ಮಾಡಲಾಗಿದೆ" ಎಂದು ತಿಳಿಸಿದರು.
"ಅನಿಮೇಷನ್ ಆ್ಯಂಡ್ ವಿಶುವಲ್ ಎಫೆಕ್ಟ್ ಸೆಕ್ಟರ್ನಲ್ಲಿ ಕರ್ನಾಟಕ ಇಲ್ಲವೆಂದಾದಲ್ಲಿ ಬಂಡವಾಳ, ಉದ್ಯೋಗ, ತಂತ್ರಜ್ಞಾನ ಕೊರತೆಯನ್ನು ಕರ್ನಾಟಕ ಎದುರಿಸಬೇಕಾಗುತ್ತದೆ. ನಮ್ಮಲ್ಲಿ ಐಟಿ ಬಿಟಿ ಎವಿಜಿಸಿ ಪಾಲಿಸಿಯಿಂದಾಗಿ 300ಕ್ಕಿಂತ ಹೆಚ್ಚು ಕಂಪನಿಗಳು ಕೆಲಸ ಮಾಡುತ್ತಿವೆ. ಬಾಲಿವುಡ್, ಟಾಲಿವುಡ್ ಸಿನಿಮಾಗಳ ಗ್ರಾಫಿಕ್ಸ್ ಇಲ್ಲೇ ಸಿದ್ಧವಾಗುತ್ತಿವೆ. ಗೇಮಿಂಗ್, ವಿಶುವಲ್ ಎಫೆಕ್ಟ್ ಗೇಮಿಂಗ್ನಲ್ಲಿ ಹೆಚ್ಚು ಸ್ಥಾನ ಪಡೆಯಬೆಕಾದರೆ GAFX ಬಹಳ ಪ್ರಮುಖವಾಗಿದೆ. ನಮ್ಮ ದೇಶದಲ್ಲಿ ಎಲ್ಲೂ ಈ ರೀತಿಯ ಸರ್ಕಾರಿ ಕಾರ್ಯಕ್ರಮ ನಡೆಯುವುದಿಲ್ಲ. ಬಿ ಟು ಬಿ ಫ್ಲಾಟ್ ಫಾರಂ ಇರುತ್ತದೆ. ವಿಶ್ವಾದ್ಯಂತದಿಂದ ಬಂಡವಾಳ ತರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಇದು. 6 ಸಾವಿರಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ" ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ: ರಾಮಮಂದಿರಕ್ಕೆ ಜನರನ್ನು ಕರೆದುಕೊಂಡು ಹೋಗಲು ಬಿಜೆಪಿ ವ್ಯವಸ್ಥೆ ಮಾಡುತ್ತಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ, "ರಾಮಮಂದಿರಕ್ಕೆ ಕರೆದೊಯ್ಯಲಿ. ತೀರ್ಥಯಾತ್ರೆ ತಾನೆ, ಸ್ವಲ್ಪ ಪ್ರಬುದ್ಧತೆಯಾದರು ಬರಲಿ. ರಾಜ್ಯ ಸರ್ಕಾರದಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯಾವುದೇ ಯೋಜನೆ ಇಲ್ಲ" ಎಂದರು.
ನನಗೆ ಭಕ್ತಿ ಇಲ್ಲ: "ರಾಮಮಂದಿರದ ಬಗ್ಗೆ ನಾವು ಎಲ್ಲಿ ಪ್ರಶ್ನೆ ಮಾಡಿದ್ದೇವೆ. ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಏಕೆ? ಅಂತ ಸಾಧು ಸಂತರು ಕೇಳಿದ್ದಾರೆ, ನಾವು ಕೇಳಿದ್ದಲ್ಲ. ನಾನು ಯಾವ ದೇವಾಲಯಕ್ಕೂ ಹೋಗುವುದಿಲ್ಲ. ಯಾರಾದರೂ ಬನ್ನಿ ಪ್ರಿಯಾಂಕ್ ಅಂದರೆ ಬರುತ್ತೇನೆ. ಯಾರಾದರು ಕರೆದುಕೊಂಡು ಹೋದರೆ ಹೋಗುತ್ತೇನೆ. ಕಲಿಯಲು ಹೋದರೆ ತಪ್ಪೇನಿದೆ? ಬಿಜೆಪಿಯ ಎಷ್ಟು ಜನ ಶಾಸಕರು ರಾಮಾಯಣ ಓದಿದ್ದಾರೆ? ಎಷ್ಟು ಜನರಿಗೆ ಹನುಮಾನ್ ಚಾಲೀಸ್ ಬರುತ್ತದೆ? ನಾನು ಋಷಿಕೇಶ, ಬನಾರಸ್ ಎಲ್ಲಾ ಕಡೆ ಹೋಗಿದ್ದೇನೆ. ನಾನು ನಂಬಿರುವುದು ಬಸವ ತತ್ವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ ತತ್ವ. ನನಗೆ ಭಕ್ತಿ ಇಲ್ಲ, ಏನು ಮಾಡಲಿ. ನೀವು ಯಾರಾದರೂ ಅಯೋಧ್ಯೆಗೆ ಕರೆದುಕೊಂಡು ಹೋದರೆ ಅಧ್ಯಯನ ಮಾಡಲು ಬರುತ್ತೇನೆ" ಎಂದರು.
ಇದನ್ನೂ ಓದಿ:ಶ್ರೀರಾಮ ಏನು ಬಿಜೆಪಿಯವರ ಮನೆ ಆಸ್ತಿನಾ : ಡಿಸಿಎಂ ಡಿಕೆಶಿ