ಪುತ್ತೂರು ಬಳಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಪುತ್ತೂರು (ದಕ್ಷಿಣ ಕನ್ನಡ):ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಾಗದ ದಾಖಲೆಗಳನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಹಸ್ತಾಂತರಿಸಿದರು.
ಪುತ್ತೂರು ಆಡಳಿತ ಸೌಧದ ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕಾಗಿ ಜಾಗದ ದಾಖಲೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮುಂದಿನ 3 ವರ್ಷಗಳ ಅವಧಿಯಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು ಹಾಗೂ ಕಂದಾಯ ಇಲಾಖೆಯು ಜಾಗ ಸರ್ವೆ ನಡೆಸಿ ಪರಿಶೀಲನೆ ಮಾಡಿ ಇದೀಗ ಹಸ್ತಾಂತರ ಮಾಡಲಾಗುತ್ತಿದೆ. ಈ ಪ್ರಸ್ತಾವನೆ ಸರ್ಕಾರದಲ್ಲಿ ಬಾಕಿಯಾಗಿತ್ತು. ಇದೀಗ ಅದಕ್ಕೆ ಚಾಲನೆ ನೀಡಿದ್ದು, 30 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಜಾಗ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಎರಡು ಕ್ರೀಡಾಂಗಣ ನಿರ್ಮಾಣ:ಹಿಂದಿನ ಪ್ರಸ್ತಾವನೆಯಲ್ಲಿ ಕೇವಲ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮಾತ್ರ ಇತ್ತು. ಈ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಇದೀಗ ಪ್ರಮುಖವಾದ ಎರಡು ಷರತ್ತುಗಳೊಂದಿಗೆ ಈ ನಿರ್ಮಾಣ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಜೊತೆಗೆ ಸ್ಥಳೀಯ ಯುವಕರಿಗೆ ಕ್ರಿಕೆಟ್ ಆಟವಾಡಲು ಮತ್ತೊಂದು ಮೈದಾನವೂ ನಿರ್ಮಾಣವಾಗಲಿದೆ. ಆದರೆ, ಈ ಮೈದಾನದಲ್ಲಿ ಅಂಡರ್‌ಆರ್ಮ್ ಕ್ರಿಕೆಟ್ ಆಡಲು ಅವಕಾಶ ಇಲ್ಲ. ಓವರ್‌ಆರ್ಮ್ಗೆ ಮಾತ್ರ ಅವಕಾಶ ಇದೆ. ನಾನು ಅಂಡರ್‌ಆರ್ಮ್ ಕ್ರಿಕೆಟ್ ವಿರೋಧಿಯಲ್ಲ. ಆದರೆ ಅಂಡರ್‌ಆರ್ಮ್ ಕ್ರಿಕೆಟ್‌ಗೆ ಸೀಮಿತ ಚೌಕಟ್ಟು ಇದೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಓವರ್‌ಆರ್ಮ್ ಕ್ರಿಕೆಟ್ ಅನಿವಾರ್ಯ ಎಂದು ಅವರು ಹೇಳಿದರು.
ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಮಾತನಾಡಿ, ಪುತ್ತೂರಿಗೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಕನಸು ಈ ಮೂಲಕ ನೆರವೇರುತ್ತಿದೆ. ಒಂದಷ್ಟು ಷರತ್ತುಗಳ ಜೊತೆಗೆ ಸ್ಥಳದ ಆರ್‌ಟಿಸಿ, ನಕ್ಷೆ, ಹಸ್ತಾಂತರ ಸರ್ಟಿಫಿಕೇಟ್ಗಳನ್ನು ಹಸ್ತಾಂತರ ಮಾಡಲಾಗಿದೆ. ಪುತ್ತೂರು ಉಪವಿಭಾಗದ ಈ ಮೈದಾನದಿಂದ ಯುವಕ್ರಿಕೆಟ್ ಪ್ರತಿಭೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಎಂ.ಬಿ.ವಿಶ್ವನಾಥ ರೈ, ಉಮಾನಾಥ ಶೆಟ್ಟಿ ಪೆರ್ನೆ, ಅಮಲ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವ, ಕೆಎಸ್‌ಸಿಎ ಮಂಗಳೂರು ವಲಯದ ರತನ್, ಯೂನಿಯನ್ ಕ್ರಿಕೆರ‍್ಸ್ನ ಕಾರ್ಯದರ್ಶಿ ವಿಶ್ವನಾಥ ನಾಯಕ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಶಾಧಿಕಾರಿ ಶ್ರೀಕಾಂತ್ ಕೊಳತ್ತಾಯ, ತರಬೇತಿದಾರ ಎಲಿಯಾಸ್ ಪಿಂಟೊ, ಸದಸ್ಯ ವಾಮನ ಪೈ, ಪ್ರತಾಪ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಭೂ ಪರಿಹಾರ ನೀಡದೆ ವಿಳಂಬ : ಎಸಿ ಕಚೇರಿಯ ಪೀಠೋಪಕರಣ ವಶಕ್ಕೆ ಪಡೆದ ರೈತರು