ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ಮಾನವ - ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆ.12ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದೆ.
ವಿಶ್ವ ಆನೆ ದಿನವಾದ ಆ.12ರಂದೇ ಕರ್ನಾಟಕ ಅರಣ್ಯ ಇಲಾಖೆಯು ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಈ ಸಮ್ಮೇಳನದ ಪ್ರಾಥಮಿಕ ಗುರಿಯು ಜ್ಞಾನ-ಹಂಚಿಕೆ, ಉತ್ತಮ-ಕಲಿಕೆಯ ಅವಕಾಶಗಳನ್ನು ಪೋಷಿಸುವುದು, ಮಾನವ ಮತ್ತು ಆನೆಗಳ ನಡುವೆ ಸಹಬಾಳ್ವೆಯನ್ನು ಬೆಳೆಸಲು ಅಂತರ್ಗತ ವಿಧಾನಗಳನ್ನು ಪ್ರತಿಪಾದಿಸುವುದು. ಮಾನವ ಹಾಗೂ ಆನೆಗಳ ನಡುವಿನ ನಕಾರಾತ್ಮಕ ಸಂವಹನವನ್ನು ನಿರ್ವಹಿಸುವ ಪರಿಹಾರ/ವಿಧಾನಗಳನ್ನು ಗುರುತಿಸಲು ವಿಶ್ವದಾದ್ಯಂತ ಅರಣ್ಯಇಲಾಖೆ ಅಧಿಕಾರಿಗಳು, ಶೈಕ್ಷಣಿಕ ಸಂಶೋಧಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಒಳಗೊಳ್ಳುವ ಮೂಲಕ ಏಷ್ಯನ್ ಆನೆಗಳ ಬಗ್ಗೆ ಪರಿಣತಿಯನ್ನು ಒಟ್ಟುಗೂಡಿಸುವ ಗುರಿಯನ್ನು ಈ ಸಮ್ಮೇಳನವು ಹೊಂದಿದೆ.
ಈ ಸಮ್ಮೇಳನವು ಸಂವಾದಾತ್ಮಕ ಚರ್ಚೆಗಳು ಮತ್ತು ವೈಜ್ಞಾನಿಕ ಉಪನ್ಯಾಸಗಳನ್ನು ಒಳಗೊಂಡಿದ್ದು, ಆನೆಗಳನ್ನು ಸಂರಕ್ಷಿಸಲು ಮತ್ತು ಮಾನವ-ಆನೆಗಳ ಪರಸ್ಪರ ಸಂಘರ್ಷಣ ಕ್ರಿಯೆಯನ್ನು ಪರಿಹರಿಸಲು, ರಚನಾತ್ಮಕ ಸಂವಾದಗಳನ್ನು ಆಯೋಜಿಸಲಾಗುತ್ತದೆ. ಮಾನವ ಮತ್ತು ಆನೆಗಳು ಹಂಚಿಕೊಳ್ಳುವ ಭೂಭಾಗಗಳಲ್ಲಿ ಸಾಮರಸ್ಯದ ಸಹಬಾಳ್ವೆಯನ್ನು ಪ್ರೋತ್ಸಾಹಿಸಲು ರಾಜ್ಯ ಅರಣ್ಯ ಇಲಾಖೆಯು, ಸ್ಥಳೀಯ ಸಮುದಾಯಗಳು, ಸಂರಕ್ಷಣಾ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾದ ವಿಧಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ಗುರುತಿಸುವುದು ಮೂಲ ಉದ್ದೇಶವಾಗಿದೆ.
ಆ.12ರಂದು ಬೆಳಗ್ಗೆ 10ಕ್ಕೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ನಡೆಯುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಅವರು ಭಾಗವಹಿಸಲಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆನೆ ಆವಾಸ ಸ್ಥಾನವಿರುವ ವಿವಿಧ ದೇಶಗಳ ಸಂಶೋಧಕರು ಹಾಗೂ ಪ್ರತಿನಿಧಿಗಳು, ಆನೆ ಆವಾಸಸ್ಥಾನವಿರುವ ಭಾರತದ ವಿವಿಧ ರಾಜ್ಯಗಳ ಅರಣ್ಯಮಂತ್ರಿಗಳು, ಅರಣ್ಯಾಧಿಕಾರಿಗಳು, ಸಂಶೋಧಕರು ಹಾಗೂ ಇತರೆ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣಸಂಸ್ಥೆಗಳು, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ.
ಸಂಶೋಧನಾ ಲೇಖನ ಆಹ್ವಾನ: ವಿಷಯವಾರು, ಸಂಶೋಧನಾ ಲೇಖನಗಳನ್ನು ಎಲ್ಲೆಡೆಯಿಂದ ಆಹ್ವಾನಿಸಲಾಗಿದೆ ಮತ್ತು ಸಂಶೋಧನಾ ಲೇಖನ ಆಯ್ಕೆ ಸಮಿತಿಯು ಅದನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ, ಸಮಿತಿಯು ಪಿಪಿಟಿ ಅಥವಾ ಪೋಸ್ಟ್ ಉಪನ್ಯಾಸ (ಆನ್ಲೈನ್ /ಆಫ್ಲೈನ್) ಮೂಲಕ ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಬಹುದಾದ 20 ಸಂಶೋಧಕರ ಪಟ್ಟಿಯನ್ನು ಆಯ್ಕೆಮಾಡುತ್ತದೆ.