ಬೆಂಗಳೂರು:ಶರ್ಟ್ ಗುಂಡಿ ಕಿತ್ತು ಹೋಗಿದ್ದ ಕಾರ್ಮಿಕನೊಬ್ಬನಿಗೆ ಸರಿಯಾಗಿ ಗುಂಡಿ ಹಾಕಿಕೊಂಡು ನಂತರ ಬಾ, ಇಲ್ಲದಿದ್ದರೆ ನಮ್ಮ ಮೆಟ್ರೋ ರೈಲು ಹತ್ತಲು ಬಿಡುವುದಿಲ್ಲ ಎಂದು ನಿಲ್ದಾಣದಲ್ಲಿಯೇ ನಿಲ್ಲಿಸಿ ಸಿಬ್ಬಂದಿ ದರ್ಪ ತೋರಿಸಿರುವ ಘಟನೆ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಕೊಳಕು ಬಟ್ಟೆ ಧರಿಸಿದ್ದಾರೆ ಎಂಬ ಕಾರಣವೊಡ್ಡಿ ರೈತರೊಬ್ಬರಿಗೆ ಪ್ರವೇಶಾವಕಾಶ ನಿರಾಕರಿಸಿದ್ದ ಮೆಟ್ರೋ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿರುವ ಆರೋಪ ಎದುರಿಸುತ್ತಿದೆ. ಸಿಬ್ಬಂದಿಯ ಈ ವರ್ತನೆಯಿಂದಾಗಿ ಯುವಕ ನಿಲ್ದಾಣದಲ್ಲಿಯೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಆರೋಪಿಸಲಾಗಿದೆ. ಯುವಕನ ಪರಿಸ್ಥಿತಿಯನ್ನು ಗಮನಿಸಿದ ಪ್ರಯಾಣಿಕರೊಬ್ಬರು ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸರಿಯಾದ ಬಟ್ಟೆ ಇಲ್ಲದವರಿಗೆ, ರೈತರಿಗೆ, ಕಾರ್ಮಿಕರಿಗೆ ಇಲ್ಲದ ಮೆಟ್ರೋ ಕೇವಲ ಸಿರಿವಂತರಿಗೆ ಮಾತ್ರ ಸೀಮಿತವಾಗಿದೆಯೇ? ಫ್ಯಾಷನ್ ಹೆಸರಿನಲ್ಲಿ ಅರೆಬೆತ್ತಲೆ ಉಡುಗೆ ತೊಟ್ಟು ಬರುವ ಯುವತಿಯರಿಗೂ ಇದೇ ರೀತಿ ಹೇಳುವ ಧೈರ್ಯವಿದೆಯೇ? ಎಂದು ಮೆಟ್ರೋ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿ.ಎಂ.ಆರ್.ಸಿ.ಎಲ್ ಪ್ರತಿಕ್ರಿಯೆ:ನಮ್ಮ ಮೆಟ್ರೋ ಸಂಸ್ಥೆ ಯಾವುದೇ ರೀತಿಯಲ್ಲಿ ಯಾರನ್ನು ಸಹ ತಾರತಮ್ಯ ಮಾಡುವುದಿಲ್ಲ. ಬಡವರು-ಶ್ರೀಮಂತರು, ಹೆಣ್ಣು- ಗಂಡು ಎಲ್ಲರೂ ಇಲ್ಲಿ ಸರಿಸಮಾನರಾಗಿ ಪ್ರಯಾಣಿಸಬಹುದಾಗಿದೆ. ಈ ಘಟನೆಯಲ್ಲಿ ಪ್ರಯಾಣಿಸಲು ಹೊರಟಿದ್ದ ವ್ಯಕ್ತಿ ಪ್ರಾಥಮಿಕವಾಗಿ ಮದ್ಯ ಸೇವಿಸಿರುವುದು ಭದ್ರತಾ ಸಿಬ್ಬಂದಿಗೆ ತಿಳಿದು ಬಂದಿತ್ತು. ವಯಸ್ಸಾದವರು, ಹೆಣ್ಣು ಮಕ್ಕಳು, ಮಕ್ಕಳಿಗೆ ತೊಂದರೆ ಕೊಡಬಹುದು ಎನ್ನುವ ಅನುಮಾನದಿಂದ ಅವರನ್ನು ಸ್ವಲ್ಪ ಹೊತ್ತು ತಡೆದು ನಿಲ್ಲಸಲಾಗಿತ್ತು. ತದ ನಂತರ ಅವರಿಗೆ ತಿಳಿ ಹೇಳಿ, ಅವರೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಭರವಸೆ ನೀಡಿದ ನಂತರ ಪ್ರಯಾಣಿಸಲು ಅವಕಾಶನೀಡಲಾಗಿದೆ ಎಂದು ಈಟಿವಿ ಭಾರತಕ್ಕೆ ಬಿ.ಎಂ.ಆರ್.ಸಿ.ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಳೆ ಬಟ್ಟೆ ಹಾಕಿದ್ದಾನೆ ಎಂದು ರೈತನನ್ನು ತಡೆದ ಮೆಟ್ರೋ ಸಿಬ್ಬಂದಿ: ಸಾರ್ವಜನಿಕರಿಂದ ಆಕ್ರೋಶ, ಸಿಬ್ಬಂದಿ ವಜಾ
ರಾಜಾಜಿನಗರ ಮೆಟ್ರೋದಲ್ಲಿ ಇತ್ತೀಚೆಗಷ್ಟೇ ಹಳೆ ಬಟ್ಟೆ ಹಾಕಿದ್ದಾರೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ರೈತರೊಬ್ಬರನ್ನು ತಡೆಯುವ ಮೂಲಕ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣರಾಗಿದ್ದರು. ಬಟ್ಟೆ ಕ್ಲೀನ್ ಇಲ್ಲ ಎಂದು ರೈತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿಯ ಅತಿರೇಕದ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮೆಟ್ರೋ ಎಂದರೆ ವಿಐಪಿಗಳಿಗೆ ಮಾತ್ರ ಇರುವುದಾ?, ಒಳ್ಳೆ ಬಟ್ಟೆ ಹಾಕೊಂಡು ಬಂದವರಿಗೆ ಮಾತ್ರವೇ ಅವಕಾಶವೇ? ನೀವೇನೂ ಫ್ರೀಯಾಗಿ ಒಳಗೆ ಬಿಡುತ್ತೀರಾ?, ಅವರು ಕಾಸು ಕೊಟ್ಟು ಮೆಟ್ರೋ ಪ್ರಯಾಣ ಬೆಳೆಸಲು ಬಂದಿದ್ದಾರೆ ಎಂದು ಸಿಬ್ಬಂದಿಗೆ ಅಲ್ಲಿದ್ದರು ಕ್ಲಾಸ್ ತೆಗೆದುಕೊಂಡಿದ್ದರು. ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋವನ್ನು ಎಕ್ಸ್ ಆ್ಯಪ್ನ ಖಾತೆಗಳಲ್ಲಿ ಹಾಕಿಕೊಂಡು ಕಿಡಿಕಾರಿದ್ದರು. ಇದನ್ನು ಗಮನಿಸಿದ ನಮ್ಮ ಮೆಟ್ರೋ, ತಪ್ಪು ಕಂಡು ಬಂದ ಹಿನ್ನೆಲೆ ಭದ್ರತಾ ಮೇಲ್ವಿಚಾರಕನನ್ನು ಸೇವೆಯಿಂದ ವಜಾಗೊಳಿಸಿ ವಿಷಾದ ವ್ಯಕ್ತಪಡಿಸಿತ್ತು.