ಬೆಂಗಳೂರು: ನಗರ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಾಗೂ ಪೊಲೀಸರಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ನಗರ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾದಂತೆ ಹೊಯ್ಸಳ ವಾಹನ ಹಾಗೂ ಪೊಲೀಸ್ ಜೀಪ್ಗಳಲ್ಲಿ ಡ್ಯಾಷ್ ಕ್ಯಾಮರಾ ಅಳವಡಿಸಲು ಮುಂದಾಗಿದೆ.
"ನಗರದಲ್ಲಿರುವ 241 ಹೊಯ್ಸಳ ಹಾಗೂ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳು ಬಳಸುವ ಪೊಲೀಸ್ ಜೀಪ್ಗಳಲ್ಲಿ ಒಟ್ಟು 500 ಡ್ಯಾಷ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಚಾಲಕ ಸೀಟಿನ ಒಳಗೆ ಹಾಗೂ ಹೊರಗೆ ಎರಡು ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸೇಫ್ ಸಿಟಿ ಯೋಜನೆ ಅನುದಾನದಡಿ 241 ಹೊಯ್ಸಳ ವಾಹನಗಳಿಗೆ ಹಾಗೂ ರಾಜ್ಯ ಸರ್ಕಾರದ ಅನುದಾನಡಿ ಪೊಲೀಸ್ ಜೀಪ್ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಬಹುದಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.