ಕರ್ನಾಟಕ

karnataka

ETV Bharat / state

ಟ್ಯಾಪ್‌ಗೆ ಏರಿಯೇಟರ್ ಹಾಕಿಸಿಕೊಳ್ಳಿ, ವಾಟರ್‌ ಬಿಲ್ ತಗ್ಗಿಸಿ! ಬೆಂಗಳೂರಿನಲ್ಲಿದು ಕಡ್ಡಾಯ - Installation of Aerator for Taps

ಬೆಂಗಳೂರಿನಲ್ಲಿ ನೀರು ಪೋಲಾಗುವುದನ್ನು ತಡೆಯಲು ನಲ್ಲಿಗಳಿಗೆ ಏರಿಯೇಟರ್​ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ
ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ

By ETV Bharat Karnataka Team

Published : Mar 20, 2024, 9:34 AM IST

ಬೆಂಗಳೂರು: ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಹಾಗು ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ (ವಾಟರ್‌ ಟ್ಯಾಪ್ ಮಾಸ್ಕ್‌) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ಏರಿಯೇಟರ್​ಗಳು ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೀರಿನ ಬಿಲ್​ ಅನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

ಮಂಗಳವಾರ ಜಲಮಂಡಳಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಬೆಂಗಳೂರು ನಗರ ಪ್ಲಂಬರ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಏರಿಯೇಟರ್‌ ಅಳವಡಿಕೆ ಇಲ್ಲದೇ ಇರುವಂತಹ ನಲ್ಲಿಗಳಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತದೆ. ಈ ನಲ್ಲಿಗಳಲ್ಲಿ ಏರಿಯೇಟರ್‌ ಅಳವಡಿಸುವುದರಿಂದ ಶೇ 60ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಿಸಿದಂತೆ ವಾಟರ್‌ ಟ್ಯಾಪ್ ಮಾಸ್ಕ್​ಗಳನ್ನು ಬಳಸುವುದು ಅಗತ್ಯವಾಗಿದೆ. ಇದನ್ನು ಅಳವಡಿಸುವುದು ಬಹಳ ಸುಲಭ ಪ್ರಕ್ರಿಯೆಯಾಗಿದ್ದು, ಜನರು ತಾವೇ ಅಳವಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಮಾತ್ರ ಪ್ಲಂಬರ್​ಗಳ ಸಹಾಯ ಪಡೆಯಬಹುದು ಎಂದರು.

ಪ್ಲಂಬರ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಸಭೆ

ಮಾರ್ಚ್‌ 21ರಿಂದ ಮಾರ್ಚ್‌ 31ರವರೆಗೆ ಸ್ವಯಂಪ್ರೇರಿತರಾಗಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 10 ದಿನಗಳಲ್ಲಿ ತಮಗೆ ಸಿಗುವ ಏರಿಯೇಟರ್​ಗಳನ್ನು ನಲ್ಲಿಗಳಿಗೆ ಅಳವಡಿಸಿಕೊಳ್ಳಬೇಕು. ಗಡುವಿನ ಅವಧಿಯಲ್ಲಿ ಈ ವಾಟರ್‌ ಟ್ಯಾಪ್ ಮಾಸ್ಕ್‌ಗಳನ್ನು ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳಲ್ಲಿ ಜಲಮಂಡಳಿಯಿಂದ ಪರವಾನಗಿ ಹೊಂದಿರುವ ಪ್ಲಂಬರ್‌ಗಳ ಸಹಾಯದಿಂದ ಏರಿಯೇಟರ್​ಗಳನ್ನು ಅಳವಡಿಸಲಾಗುವುದು ಮತ್ತು ಈ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಮನೆಯಲ್ಲಿ ಕೈತೊಳೆಯುವ, ಪಾತ್ರೆ ತೊಳೆಯುವ, ಶವರ್, ವಾಷ್ ಬೇಸಿನ್​ನಲ್ಲಿಗಳು ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಸಾರ್ವಜನಿಕರು ಏರಿಯೇಟರ್​ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ 60 ರೂಪಾಯಿಗಳಿಂದ ಲಭ್ಯವಿದೆ. ಇದರಿಂದ ಜನರ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್‌ ಕೂಡಾ ಕಡಿಮೆ ಆಗುತ್ತದೆ ಎಂದು ಮಾಹಿತಿ ನೀಡಿದರು.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಇತರ ಕಚೇರಿಗಳಲ್ಲಿ ಏರಿಯೇಟರ್‌ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ದ್ವಿತೀಯ ಪಿಯುಸಿ ಪರೀಕ್ಷೆ-1 ಬರೆದಿದ್ದೀರಾ? ಹಾಗಿದ್ದರೆ ಮಂಡಳಿ ವೆಬ್​ಸೈಟ್​​ನಲ್ಲಿ ಮಾದರಿ ಉತ್ತರ ಪರೀಕ್ಷಿಸಿಕೊಳ್ಳಿ!

ABOUT THE AUTHOR

...view details