ಕರ್ನಾಟಕ

karnataka

ETV Bharat / state

ಯಲಹಂಕದಲ್ಲಿ ಫ್ಲೈಓವರ್‌ಗೆ ಅಳವಡಿಸಿದ್ದ ವೀರ ಸಾವರ್ಕರ್ ನಾಮಫಲಕಕ್ಕೆ ಮಸಿ: ಆರೋಪಿಗಳ ಬಂಧನ - VEER SAVARKAR BOARD - VEER SAVARKAR BOARD

ಫ್ಲೈಓವರ್​ಗೆ ಅಳವಡಿಸಿದ್ದ ವೀರ ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ವೀರ ಸಾವರ್ಕರ್ ನಾಮಫಲಕ
ವೀರ ಸಾವರ್ಕರ್ ನಾಮಫಲಕ (ETV Bharat)

By ETV Bharat Karnataka Team

Published : May 28, 2024, 8:22 PM IST

Updated : May 28, 2024, 8:34 PM IST

ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣ ಖಂಡಿಸಿದ ಬಿಜೆಪಿ (ETV Bharat)

ಯಲಹಂಕ (ಬೆಂಗಳೂರು): ವೀರ ಸಾವರ್ಕರ್ ಹೆಸರಿದ್ದ ಫ್ಲೈಓವರ್​ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ಯಲಹಂಕ ಉಪನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಉಪನಗರದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಡೈರಿ ಸರ್ಕಲ್‌ನಲ್ಲಿರುವ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕ ಮತ್ತು ನಾಮಫಲಕದ ಮೇಲೆ ಇರುವ ವೀರ ಸಾವರ್ಕರ್ ಭಾವಚಿತ್ರಕ್ಕೆ ಮಸಿ ಬಳಿದ ಘಟನೆ ಸಂಬಂಧಿಸಿದಂತೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಯಲಹಂಕ ಉಪನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಬಂದ ಶಾಸಕರಾದ ಎಸ್.ಆರ್.ವಿಶ್ವನಾಥ್ ನೇತೃತ್ವದ ಬಿಜೆಪಿ ಕಾರ್ಯಕರ್ತರು ಮಸಿ ಬಳಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಕಿದ ಮಸಿಯನ್ನ ಅಳಿಸಿ, ವೀರ ಸಾವರ್ಕರ್ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ಜೈಕಾರ ಕೂಗಿದರು.

ಇದನ್ನೂ ಓದಿ:ಪೆಟ್ರೋಲ್​, ಡಿಸೇಲ್​ ಖಾಲಿ ಅಂತಾ ವಾಹನ ರಸ್ತೆಯಲ್ಲಿ ನಿಲ್ಲಿಸಿದ್ರೂ ಬೀಳುತ್ತೆ ಕೇಸ್​; ಈ ವರ್ಷ ದಾಖಲಾದ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳೆಷ್ಟು? - Drunk and drive case

ಬಿಜೆಪಿ ನಾಯಕರಿಂದ ಖಂಡನೆ:ಯಲಹಂಕದ ವೀರ್ ಸಾವರ್ಕರ್ ಸೇತುವೆ ನಾಮಫಲಕ್ಕೆ ಮಸಿ ಬಳಿದಿರುವುದನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿ, ಒಬ್ಬ ರಾಷ್ಟ್ರಭಕ್ತನನ್ನು ಅಪಮಾನಿಸಲು ಮತ್ತೊಬ್ಬ ರಾಷ್ಟ್ರಭಕ್ತನ ಭಾವಚಿತ್ರವನ್ನು ಗುರಾಣಿಯಂತೆ ಬಳಸಿಕೊಂಡು ಯಲಹಂಕದ ವೀರ್ ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಎನ್.ಎಸ್.ಯು.ಐ ಕಿಡಿಗೇಡಿಗಳು ಮಸಿ ಬಳಿದು ಅಪಮಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಅತ್ಯಂತ ಖಂಡನೀಯ. ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸಂಸ್ಕೃತಿಗೆ ಈ ಘಟನೆ ಕನ್ನಡಿ ಹಿಡಿದಿದೆ ಎಂದು ಟೀಕಿಸಿದ್ದಾರೆ.

ಸಾರ್ವಕರ್ ಅವರನ್ನು ಅಪಮಾನಿಸುವ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಪ್ರದರ್ಶಿಸಿರುವ ಕಿಡಿಗೇಡಿಗಳು ಇಬ್ಬರೂ ರಾಷ್ಟ್ರಭಕ್ತರನ್ನು ಏಕಕಾಲದಲ್ಲಿ ಅಪಮಾನಿಸಿದ್ದಾರೆ. ಈ ಕೂಡಲೇ ವೀರ ಸಾವರ್ಕರ್ ಅವರನ್ನು ಅಪಮಾನಿಸಿರುವ ಎಲ್ಲರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಕ್ಸ್ ಪೋಸ್ಟ್ ಮಾಡಿ, ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಸಾರ್ವಕರರಿಗೆ ಅಪಮಾನ ಮಾಡಿದರೆ ಖಂಡಿತ ಸಹಿಸುವುದಿಲ್ಲ. ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ವೀರ ಸಾವರ್ಕರ್‌ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು ಎಂಬುದು ಎಸ್.ಡಿ.ಪಿ.ಐ ಅಂಗಸಂಸ್ಥೆ ಕ್ಯಾಂಪಸ್‌ ಫ್ರಂಟ್‌ನ ಇರಾದೆಯಾಗಿತ್ತು. ಅದನ್ನು ಈಡೇರಿಸಿ ಪಿಎಫ್ಐಗೆ ಮಂಡಿಯೂರಿದ ಕಾಂಗ್ರೆಸ್ ಸರ್ಕಾರ ಈಗ NSUI ಮೂಲಕ ಈ ಹೇಯ ಕೃತ್ಯ ಮಾಡಿಸಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಇಂದು ಸಾವರ್ಕರ್‌ ಅವರನ್ನು‌ ವಿರೋಧಿಸಬಹುದು. ಆದರೆ, ಸಾವರ್ಕರ್‌ ಅವರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವ ಅಸಂಖ್ಯಾತ ಭಾರತೀಯರ ಸಾಲಲ್ಲಿ‌ ಗಾಂಧೀಜಿ ಅವರೂ ನಿಲ್ಲುತ್ತಾರೆ‌. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು. @INCKarnataka ಗಾಂಧೀಜಿಯನ್ನೂ ವಿರೋಧಿಸುವುದೇ?. ಸಾವರ್ಕರ್‌ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್‌ ಅವರಿಗೆ ಪ್ರೇರಣೆಯಾಗಿತ್ತು. ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ. 'ಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್‌ ಕೂಡಾ ಒಬ್ಬರುʼ ಎಂದು ಅಂಬೇಡ್ಕರ್‌ ಕೊಂಡಾಡಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಪಕ್ಷ ಸಾರ್ವಕರ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತೆ ಅಂದರೆ ಇದೇನಾ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಗೆ ನೀಡುವ ಗೌರವ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್‌ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್‌ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದರ ಜೊತೆಗೆ ವೀರ ಸಾರ್ವಕರ್ ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು. ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವರನ್ನೂ ನಂಬುವುದಿಲ್ಲವೇ?. ಅಂಡಮಾನಿನ ಕತ್ತಲ ಕೋಣೆಯಲ್ಲಿ ವೀರ ಸಾವರ್ಕರ್ ಕಾಲ ಕಳೆಯದಿರುತ್ತಿದ್ದರೆ, ಅವರ ಚಿಂತನೆಗಳು ರಾಷ್ಟ್ರದಲ್ಲಿ ಹರಿಯದಿರುತ್ತಿದ್ದರೆ ಭಾರತ 1947 ರಲ್ಲಿ ಸ್ವತಂತ್ರವಾಗುತ್ತಲೂ ಇರಲಿಲ್ಲ, ನೆಹರೂ ಪರಿವಾರ 60 ವರ್ಷ ಅಧಿಕಾರ ಅನುಭವಿಸಲೂ ಆಗುತ್ತಿರಲಿಲ್ಲ, ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಿತ್ತನೆ ಬೀಜ ದರ ಶೇ.30 ರಷ್ಟು ಹೆಚ್ಚಳ: ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ಹೀಗಿದೆ - Seeds Rate Hike

Last Updated : May 28, 2024, 8:34 PM IST

ABOUT THE AUTHOR

...view details