ಕೋಲಾರ: ಅದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಹೆಸರಲ್ಲಿ ನಿರ್ಮಾಣವಾದ ಪಾರ್ಕ್. ಆದರೆ ಇನ್ನೂ ಪಾರ್ಕ್‌ನ ಅನುಕೂಲ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಊರೊಂದು ಕಡೆಯಾದರೆ, ಪಾರ್ಕ್ ಮತ್ತೊಂದೆಡೆ ಇದೆ. ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಪಾರ್ಕ್ ಉದ್ಘಾಟನೆಗೂ ಮುನ್ನವೇ ಅವನತಿ ಹಾದಿ ಹಿಡಿದಿದೆ. ಮಾಲೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಮಾಲೂರು ಪಟ್ಟಣದ ಹೊರವಲಯದ ಹೊಸೂರು ರಸ್ತೆಯ ಕೊರೊಂಡಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಈ ಪಾರ್ಕ್ ನಿರ್ಮಿಸಿದೆ.
ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಆಟವಾಡಲು ಮಕ್ಕಳಾಗಲೀ, ವೃದ್ದರಾಗಲೀ, ಪೋಷಕರಾಗಲೀ ಯಾರೂ ಬರುತ್ತಿಲ್ಲ. ಇದಕ್ಕೆ ಕಾರಣ ಇದು ಮಾಲೂರು ಪಟ್ಟಣಕ್ಕಿಂತ ಬಹಳ ದೂರದಲ್ಲಿದೆ. ಇದರ ಜೊತೆಗೆ ಅಲ್ಲಿಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲ ಅನ್ನೋದು ಒಂದೆಡೆಯಾದ್ರೆ, ಅಲ್ಲಿ ಪಾರ್ಕ್ ಮಾಡಿರುವುದೇ ಎಷ್ಟೋ ಜನಕ್ಕೆ ಗೊತ್ತಿಲ್ಲ!.
ಹೀಗಾಗಿ ಪಾರ್ಕ್ ನಿರ್ಮಾಣವಾಗಿ ಉದ್ಘಾಟನೆಯಾಗುವ ಮೊದಲೇ ಅಲ್ಲಿನ ಉಪಕರಣಗಳೆಲ್ಲವೂ ತುಕ್ಕು ಹಿಡಿಯುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾರ್ಕ್ ನಿರ್ಮಿಸಿ ಅದಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಹೆಸರಿಟ್ಟು, ಕೊನೆಗೆ ಅವರ ಹೆಸರಿಗಾದರೂ ಸಾರ್ಥಕತೆ ಬರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಳ್ಳಬೇಕಿತ್ತು. ಆದರೆ, ಪಾರ್ಕ್ ನಿರ್ಮಾಣ ಮಾಡಿ ನಾಲ್ಕು ವರ್ಷಗಳೇ ಕಳೆದರೂ ಇದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.