ಬೆಂಗಳೂರು:ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ 'ಓದುವ ಬೆಳಕು' ಕಾರ್ಯಕ್ರಮದ ಅಂಗವಾಗಿ ಆಗಸ್ಟ್ ತಿಂಗಳು ಪೂರ್ತಿ 'ಭಾರತ ಸ್ವಾತಂತ್ರ್ಯ ದಿನಾಚರಣೆ' ಸಂಭ್ರಮೋತ್ಸವ ಆಯೋಜಿಸುವಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದೊಂದು ಘಟನೆ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ 'ಮಕ್ಕಳಿಗಾಗಿ ಗಾಂಧಿ', 'ಸ್ವರಾಜ್ಯದ ಕಥೆ' ಇನ್ನಿತರ ಸ್ವಾತಂತ್ರ್ಯದ ಪುಸ್ತಕಗಳನ್ನು ಬಳಸಿ 'ಗಟ್ಟಿ ಓದು' ಮಾಡಿಸುವುದು, ಗುಂಪು ಚರ್ಚೆ, ಭಾಷಣ ಕಾರ್ಯಕ್ರಮ ಹಾಗೂ ಪ್ರಬಂಧ ಸ್ಪರ್ಧೆ ಸೇರಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಜೊತೆಗೆ, ಆಗಸ್ಟ್ ತಿಂಗಳಿನಲ್ಲಿ ಗ್ರಂಥಾಲಯಕ್ಕೆ ಬರುವ ಎಲ್ಲಾ ಮಕ್ಕಳಿಗೂ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್ ತಯಾರಿಸಲು ತಿಳಿಸಲು ಗ್ರಂಥಾಲಯಗಳ ಮೇಲ್ವಿಚಾರಕರಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.