ಬೆಂಗಳೂರು:ರಾಜ್ಯದಲ್ಲಿ ಆಹಾರ ನೈರ್ಮಲ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟ್ರೀಟ್ ವೆಂಡರ್ಸ್ ಆಫ್ ಇಂಡಿಯಾ (ಎನ್.ಎ.ಎಸ್.ವಿ.ಐ) ಮತ್ತು ನೆಸ್ಲೆ ಇಂಡಿಯಾ ಸಹಯೋಗದೊಂದಿಗೆ ‘ಸರ್ವ್ ಸೇಫ್ ಫುಡ್’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕರ್ಮವನ್ನು ಉದ್ಘಾಟಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘ ಮತ್ತು ನೆಸ್ಲೆ ಇಂಡಿಯಾ ಪರಸ್ಪರ ಸಹಯೋಗದೊಂದಿಗೆ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಹಭಾಗಿತ್ವದಲ್ಲಿ, ರಾಜ್ಯದಲ್ಲಿನ ಕಾರ್ಯಸೂಚಿಗೆ ಕೊಡುಗೆ ನೀಡಿವೆ. ಅವರಿಗೆ ಕೃತಜ್ಞನಾಗಿದ್ದೇನೆ. ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್, ಬೀದಿ ಆಹಾರ ಮಾರಾಟಗಾರರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಈ ಕಾರ್ಯಕ್ರಮವು ಇನ್ನಷ್ಟು ಯಶಸ್ವಿಯಾಗಬೇಕು ಎಂದು ಹೇಳಿದರು.
ನೆಸ್ಲೆ ಇಂಡಿಯಾದ ಕಾರ್ಪೊರೇಟ್ ವ್ಯವಹಾರಗಳು ಮತ್ತು ಸುಸ್ಥಿರತೆಯ ನಿರ್ದೇಶಕ ಸಂಜಯ್ ಖಜುರಿಯಾ ಮಾತನಾಡಿ, ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್ ನಮ್ಮ ಸ್ವಂತ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯಷ್ಟೇ ಅಲ್ಲದೆ ಒಟ್ಟಾರೆ ಆಹಾರ ಸುರಕ್ಷತೆಯನ್ನೇ ಸುಧಾರಿಸುವ ಬದ್ಧತೆಯ ಸಾಕಾರರೂಪವಾಗಿದೆ. ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಪದ್ಧತಿಗಳ ಕುರಿತು ಸೂಕ್ತವಾದ ತರಬೇತಿ ನೀಡಿ ಕೌಶಲ್ಯಗಳನ್ನು ಸುಧಾರಿಸುವ ಮೂಲಕ ಬೀದಿ ಆಹಾರ ಮಾರಾಟಗಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ನಮ್ಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದೇವೆ. ಈ ಕಾರ್ಯಕ್ರಮ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2016ರಿಂದ ಸರ್ವ್ ಸೇಫ್ ಫುಡ್ ಅಭಿಯಾನ:ನೆಸ್ಲೆ ಇಂಡಿಯಾ 2016ರಲ್ಲಿ ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್ ಅಭಿಯಾನವನ್ನು ಪ್ರಾರಂಭಿಸಿದೆ. ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಛತ್ತೀಸ್‌ಗಢ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಿದೆ.
ಇದನ್ನೂ ಓದಿ:ಅರಿಶಿನ ಕಾಫಿ: ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಅಂತಾರೆ ತಜ್ಞರು