ಬೆಂಗಳೂರು:''ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದ ಕನಿಷ್ಠ 3 ಲಕ್ಷ ಜನರ ಅಭಿಪ್ರಾಯ ಸಂಗ್ರಹದ ಗುರಿ ಇದೆ. ದೇಶದಲ್ಲಿ 1 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
''ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಮಿಸ್ಡ್ ಕಾಲ್ ನೀಡುವುದರ ಮೂಲಕ ಪಾಲ್ಗೊಳ್ಳಬಹುದು. ಕರೆ ಮಾಡಲು ಸಂಖ್ಯೆ: 909090 2124 ನೀಡಲಾಗಿದೆ'' ಎಂದರು. ''ಮುಂದಿನ ಲೋಕಸಭಾ ಚುನಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಚಿಂತನೆಯಂತೆ ಪ್ರಣಾಳಿಕೆ ಬದಲು ಜನಾಭಿಪ್ರಾಯ ಪಡೆದು ಸಂಕಲ್ಪ ಪತ್ರದ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ'' ಎಂದು ತಿಳಿಸಿದರು.
''ಬಿಜೆಪಿ ಕೇಂದ್ರ ಸರಕಾರವು 2014ರ, 2019ರ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. 10 ವರ್ಷದ ಮೋದಿ ಅವರ ಆಡಳಿತಾವಧಿಯಲ್ಲಿ ಭರವಸೆ ಈಡೇರಿಸಿದ್ದಲ್ಲದೆ, ಯೋಜನೆ ಶಂಕುಸ್ಥಾಪನೆ ಜೊತೆಗೆ ಉದ್ಘಾಟನಾ ದಿನಾಂಕ ನಿಗದಿಪಡಿಸಿ ಸಕಾಲದಲ್ಲಿ ಪೂರ್ಣಗೊಳಿಸಿದ್ದನ್ನು ನೋಡಿದ್ದೇವೆ. ಜನಸಂಘ ಕಾಲದಿಂದ ಪ್ರಣಾಳಿಕೆಯಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನಕ್ಕೆ ಕಾರಣವಾದ ಜಮ್ಮು- ಕಾಶ್ಮೀರದ 370ನೇ ವಿಧಿ ರದ್ದು ಮಾಡುವ ಮೂಲಕ ಮೋದಿಯವರು ನುಡಿದಂತೆ ನಡೆದಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಈ ಬಾರಿ ಘೋಷಣಾ ಪತ್ರ ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಮುಂದಿಡಲಾಗುವುದು'' ಎಂದರು.
''ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆ ವೇಳೆ 2047ರಲ್ಲಿ 'ನಮ್ಮ ಭಾರತ ವಿಕಸಿತ ಭಾರತ' ಎಂಬ ಸಂಕಲ್ಪವನ್ನು ಮೋದಿಜೀ ಅವರು ಮುಂದಿಟ್ಟಿದ್ದಾರೆ. ಅದನ್ನು ಸಾಕಾರಗೊಳಿಸಲು ಅಭಿಪ್ರಾಯ ಸಂಗ್ರಹದ ಅಭಿಯಾನ ಆರಂಭಿಸಿದೆ. ಸಮಾಜದ ರೈತರು, ಮಹಿಳೆಯರು, ಯುವಜನತೆ ಸೇರಿ ಎಲ್ಲ ವರ್ಗದ ಜನರಿಂದ ಅಭಿಮತ ಸಂಗ್ರಹಿಸಲಿದ್ದೇವೆ. ಕರ್ನಾಟಕದಲ್ಲಿ ಅಭಿಯಾನ ಮಾರ್ಚ್ 3ರಿಂದ 15ರ ತನಕ ನಡೆಯಲಿದೆ. "ವಿಕಸಿತ ಭಾರತ - ಇದು ಮೋದಿ ಗ್ಯಾರಂಟಿ" ಈ ವಿಷಯದ ಕುರಿತು ರಾಜ್ಯಾದ್ಯಂತ ವಿಡಿಯೋ ವ್ಯಾನ್ ಹಾಗೂ ಸಲಹೆ ಪೆಟ್ಟಿಗೆಗಳ ಮೂಲಕ ಮುಂದಿನ 5 ವರ್ಷಗಳ ಗುರಿಯ ಕುರಿತು ರಾಜ್ಯದ ಜನರ ಆಶೀರ್ವಾದ ಪಡೆದು ಸಲಹೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ'' ಎಂದು ವಿವರಿಸಿದರು.