ಕರ್ನಾಟಕ

karnataka

ETV Bharat / state

ದೈವನರ್ತನೆಯ ಅನುಕರಣೆ: ಮಹಿಳೆಯ ವಿರುದ್ಧ ಆಕ್ರೋಶ ಬೆನ್ನಲ್ಲೇ ಕದ್ರಿ ಕ್ಷೇತ್ರದಲ್ಲಿ ಕ್ಷಮೆಯಾಚನೆ - Woman Mimicking Daiva narthana - WOMAN MIMICKING DAIVA NARTHANA

4 ಬೀಟ್ಸ್​ ಎಂಬ ಸಂಸ್ಥೆ ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಹಿಳೆಯೋರ್ವರು ದೈವದ ನರ್ತನವನ್ನು ಅನುಕರಣೆ ಮಾಡಿದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮಹಿಳೆ ಕದ್ರಿ ಶ್ರೀಮಂಜುನಾಥ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದಾರೆ.

ದೈವನರ್ತನೆಯ ಅನುಕರಣೆಗೆ ಕದ್ರಿ ಕ್ಷೇತ್ರದಲ್ಲಿ ಕ್ಷಮೆಯಾಚನೆ
ದೈವನರ್ತನೆಯ ಅನುಕರಣೆಗೆ ಕದ್ರಿ ಕ್ಷೇತ್ರದಲ್ಲಿ ಕ್ಷಮೆಯಾಚನೆ (ETV Bharat)

By ETV Bharat Karnataka Team

Published : Aug 15, 2024, 2:30 PM IST

Updated : Aug 15, 2024, 3:03 PM IST

ಮಹಿಳೆಯಿಂದ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಕ್ಷಮೆಯಾಚನೆ (ETV Bharat)

ಮಂಗಳೂರು:ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ದೈವನರ್ತನೆ ಮಾಡಿ ತುಳುನಾಡಿನವರ ಆಕ್ರೋಶಕ್ಕೆ ತುತ್ತಾಗಿರುವ ಕವಿತಾ ರಾವ್ ಎಂಬ ಮಹಿಳೆ ಕದ್ರಿ ಶ್ರೀಮಂಜುನಾಥ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದಾರೆ.

ಮಂಗಳೂರಿನ ಯೆಯ್ಯಾಡಿಯಲ್ಲಿ ರವಿವಾರ 4ಬೀಟ್ಸ್ ಎಂಬ ಸಂಸ್ಥೆ ಆಟಿಡೊಂಜಿ ದಿನ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಹಾಡೊಂದಕ್ಕೆ ಕವಿತಾ ರಾವ್ ದೈವದ ನರ್ತನವನ್ನು ಅನುಕರಣೆ ಮಾಡಿದ್ದರು. ಇದರ ವೀಡಿಯೋ ವೈರಲ್​ ಆಗಿ ಕವಿತಾ ರಾವ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ತುಳುಪರ ಹೋರಾಟಗಾರರು ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.

ಕಾರ್ಯಕ್ರಮ ಆಯೋಜಿಸಿದ 4 ಬೀಟ್ಸ್ ತಂಡ ಆ ಬಳಿಕ ವೀಡಿಯೋ ಮಾಡಿ ದೈವ ನರ್ತನದ ಅನುಕರಣೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ಭಕ್ತಿಯಿಂದ ನರ್ತಿಸಿದ್ದೇ ಹೊರತು, ಅವಮಾನ ಮಾಡಿದ್ದಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ದೈವನರ್ತನ, ದೈವಾವೇಶದ ಬಗ್ಗೆ ಕರಾವಳಿಗರಿಗೆ ಅದರದ್ದೇ ಆದ ನಂಬಿಕೆ, ಭಕ್ತಿಯಿದೆ. ದೈವದ ಚಪ್ಪರದಡಿ ನಡೆಯಬೇಕಿದ್ದ ಆಚರಣೆಯೊಂದು ಮನೋರಂಜನಾ ಕಾರ್ಯಕ್ರಮವಾಗಿ ಬಳಕೆಯಾಗಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ‌ ಆಕ್ರೋಶದ ಹಿನ್ನೆಲೆಯಲ್ಲಿ ಕವಿತಾ ರಾವ್ ಹಾಗೂ ಕಾರ್ಯಕ್ರಮ ಆಯೋಜಕರು ಕದ್ರಿ ಶ್ರೀಮಂಜುನಾಥ ದೈವಸ್ಥಾನದಲ್ಲಿ ದೈವನರ್ತಕ ದಯಾನಂದ ಕತ್ತಲ್‌ಸಾರ್ ಹಾಗೂ ತುಳುಪರ ಹೋರಾಟಗಾರರ ಸಮಕ್ಷಮ ಕ್ಷಮೆಯಾಚಿಸಿ, 101 ರೂ. ತಪ್ಪುಕಾಣಿಕೆ ಹಾಕಿದ್ದಾರೆ. ಕವಿತಾ ರಾವ್ ಗದ್ಗದಿತರಾಗಿ ತನ್ನಿಂದ ತಪ್ಪಾಗಿದೆ ಎಂದು ಕಣ್ಣೀರು ಸುರಿಸಿದ್ದಾರೆ. ಜೊತೆಗೆ ಇನ್ನು ಮುಂದೆ ಇಂತಹ ತಪ್ಪೆಸಗುವುದಿಲ್ಲ‌. ತಪ್ಪಿಗೆ ಪ್ರಾಯಶ್ಚಿತ್ತವಾಗಿ ಚಂಡಿಕಾ ಹೋಮವನ್ನೂ, ಕಲ್ಲುರ್ಟಿ ದೈವಕ್ಕೆ ಕೋಲವನ್ನೂ ಕೊಡುತ್ತೇನೆಂದು ದೇವರ ಎದುರು ಹರಕೆ ಕಟ್ಟಿಕೊಂಡರು‌. ಇಲ್ಲಿಗೆ ಈ ಪ್ರಕರಣ ಸುಖಾಂತ್ಯಗೊಂಡಿದೆ.

ಬಳಿಕ ಮಾತನಾಡಿದ ಕವಿತಾ ರಾವ್, "ನಾನು ಆ ಪದ್ಯಕ್ಕೆ ನೃತ್ಯ ಮಾಡಿದೆ. ನಾನು ನೃತ್ಯ ಮಾಡುತ್ತಿದ್ದೆ. ಇಲ್ಲಿ ಈ ರೀತಿ ಮಾಡಿದ್ದು ಈ ರೀತಿ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಆ ಕ್ಷಣದಲ್ಲಿ‌ ನಾನು ಆ ನೃತ್ಯ ಮಾಡಿದೆ. ನನ್ನದು ತಪ್ಪು ಆಗಿದೆ. ಆದುದರಿಂದ ದೈವ ದೇವರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಯಾರು ಕೂಡ ಇದನ್ನು ಮಾಡಬಾರದು" ಎಂದರು.

ಇದನ್ನೂ ಓದಿ:'ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ': ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಮಾಣ - Harish Poonja

Last Updated : Aug 15, 2024, 3:03 PM IST

ABOUT THE AUTHOR

...view details