ದಾವಣಗೆರೆ:ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ. 2025ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2024ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ.
ಮಾಸಾಶನಕ್ಕಾಗಿ ವೃದ್ಧೆಯ ಸಂಕಷ್ಟ: ಕಾಲಿಲ್ಲದ ವೃದ್ಧೆಯೊಬ್ಬರು ಮಾಸಾಶನದ ಹಣಕ್ಕಾಗಿ 2 ಕಿಲೋ ಮೀಟರ್ ತೆವಳಿಕೊಂಡೇ ಬಂದಿದ್ದ ಘಟನೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ನಡೆದಿತ್ತು. ಎರಡು ತಿಂಗಳಿನಿಂದ ಮಾಸಾಶನ ಬಾರದಿದ್ದಕ್ಕೆ ನಂದಿತಾವರೆಯ ಗಿರಿಜಮ್ಮ ತೆವಳಿಕೊಂಡು ಕುಣೆಬೆಳಕೆರೆ ಗ್ರಾಮಕ್ಕೆ ಬಂದಿದ್ದರು. ಇದು ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು.
ಇದನ್ನೂ ಓದಿ:ದಾವಣಗೆರೆ: ಮಾಸಾಶನ ಪಡೆಯಲು 2 ಕಿಮೀ ತೆವಳಿಕೊಂಡು ಪೋಸ್ಟ್ ಆಫೀಸ್ಗೆ ಬಂದ ವೃದ್ಧೆ - ಕುಣೆಬೆಳಕೆರೆ
ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ:ಕೇಂದ್ರ ಸರ್ಕಾರದ 2023ರ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ದಾವಣಗೆರೆ 6ನೇ ಸ್ಥಾನ ಗಿಟ್ಟಿಸಿಕೊಂಡಿತ್ತು. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯ ಸ್ವಚ್ಛತೆಯ ವಿಚಾರದಲ್ಲಿ ರಾಜ್ಯಗಳ ರ್ಯಾಂಕ್ನಲ್ಲಿ ದಾವಣಗೆರೆ 6ನೇ ಸ್ಥಾನ ಪಡೆದುಕೊಂಡಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ದಾವಣಗೆರೆ ಗಾರ್ಬೇಜ್ ಫ್ರೀ ಸಿಟಿಗಳ ಪಟ್ಟಿಯಲ್ಲಿ ಸ್ಟಾರ್ ರೇಟಿಂಗ್ ಅನ್ನೂ ಸಹ ಪಡೆದುಕೊಂಡಿದೆ. ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 169ನೇ ಸ್ಥಾನ ಪಡೆದುಕೊಂಡಿದೆ.
ಖೋಟಾ ನೋಟು ಜಾಲ ಪತ್ತೆ:ಥೇಟ್ ಅಸಲಿ ನೋಟಿನಂತೆ ನಕಲಿ (ಖೋಟಾ) ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಒಟ್ಟು ಆರು ಜನರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಒಟ್ಟು 7.70 ಲಕ್ಷ ರೂ ಮೊತ್ತದ ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಹರೀಶ್(29), ಕುಬೇರಪ್ಪ(58), ಸಂದೀಪ(30), ಮನೋಜ್ ಗೌಡ(21), ಜೆ.ರುದ್ರೇಶ(39), ಕೃಷ್ಣನಾಯ್ಕ(28) ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಬೆಳ್ಳುಳ್ಳಿ ಬೆಳೆದ ಚಿಂಚೋಳಿ ರೈತ:ಯಾದಗಿರಿ ಜಿಲ್ಲೆಯ ಚಿಂಚೋಳ್ಳಿಯ ರೈತ ಹೊನ್ನಪ್ಪಗೌಡ ಶರಣಪ್ಪಗೌಡ ತಾರನಾಳ್ ಎಂಬವರು ದಾವಣಗೆರೆ ಮಾರುಕಟ್ಟೆಯಲ್ಲಿ ಐವತ್ತು ಚೀಲ ಬೆಳ್ಳುಳ್ಳಿ ಮಾರಾಟ ಮಾಡಿ ಒಟ್ಟು 16.2500 ಹಣ ಪಡೆದಿದ್ದರು. ಲಕ್ಷಾಂತರ ಲಾಭ ಗಳಿಸಿದ್ದಕ್ಕೆ ರೈತ ಸಂತಸ ವ್ಯಕ್ತಪಡಿಸಿದ್ದರು.
ಶೌಚಾಲಯ ಸ್ವಚ್ಛಗೊಳಿಸಿದ್ದ ವಿದ್ಯಾರ್ಥಿಗಳು:ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿ ಪೋಷಕರು ಆಕ್ರೋಶಕ್ಕೆ ಗುರಿಯಾಗಿದ್ದರು. ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಬಾರದೆಂಬ ಆದೇಶದ ಹೊರತು ಶೌಚಾಲಯ ಸ್ವಚ್ಛಗೊಳಿಸಿದ್ದರು. ಅದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ತಡಮಾಡದೇ ಶಾಲೆಯ ಬಳಿ ಜಮಾಯಿಸಿದ ಗ್ರಾಮಸ್ಥರು, ಶೌಚಾಲಯ ಸ್ವಚ್ಛ ಮಾಡಿದ್ದಾರೆಂದ ಹೇಳುವ ಶಿಕ್ಷಕಿಗೆ ಹಿಡಿಶಾಪ ಹಾಕಿದ್ದರು. ಘಟನೆ ಬಳಿಕ ಶಿಕ್ಷಕಿಯನ್ನು ಅಮಾನತು ಮಾಡಲಾಗಿತ್ತು.
ಗ್ರಾ.ಪಂ. ಬಳಿ ಮೃತದೇಹವಿಟ್ಟು ಹೋರಾಟ:ಸ್ಮಶಾನ ಜಾಗ ನೀಡುವಂತೆ ಅಗ್ರಹಿಸಿ ಮೃತದೇಹವನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಂಸಾಗರದಲ್ಲಿ ಈ ಘಟನೆ ನಡೆದಿತ್ತು. ಕಂಸಾಗರ ಗ್ರಾಮ ಪಂಚಾಯತಿ ಕಚೇರಿಗೆ ದೌಡಾಯಿಸಿದ ಗ್ರಾಮಸ್ಥರು ಹಾಗು ಮೃತರ ಸಂಬಂಧಿಕರು ಪಂಚಾಯಿತಿಯಲ್ಲಿ ಮೃತದೇಹ ಇರಿಸಿ ಪ್ರತಿಭಟನೆ ಮಾಡಿ ಸ್ಮಾಶಾನಕ್ಕೆ ಸ್ಥಳ ನಿಗದಿ ಮಾಡುವಂತೆ ಮನವಿ ಮಾಡಿದ್ದರು.
ಖಾಲಿಯಾಗಿದ್ದ ಶಾಂತಿ ಸಾಗರ(ಸೂಳೆಕೆರೆ):ಬರಗಾಲದ ಹಿನ್ನೆಲೆಯಲ್ಲಿ ಶಾಂತಿಸಾಗರ (ಸೂಳೆಕೆರೆ) ಖಾಲಿಯಾಗಿ ನೀರು ತಳಮಟ್ಟಕ್ಕೆ ಸೇರಿತ್ತು. ಕೆರೆಯಲ್ಲಿರುವ ಕುದುರೆ ಕಲ್ಲು ಎಂಬ ತೂಬಿನ ಕೆಳಗೆ ನೀರು ಇಳಿದಿದ್ದರಿಂದ ಈ ಬಾರಿ ಕ್ಷಾಮ ಕಟ್ಟಿಟ್ಟ ಬುತ್ತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಸಾಕಷ್ಟು ಹಳ್ಳಿಗೆ ನೀರಿನ ಪ್ರಮುಖ ಸೆಲೆಯಾಗಿರುವ ಶಾಂತಿಸಾಗರದಲ್ಲಿ ಕೇವಲ 20 ದಿನಗಳಗಾಗುವಷ್ಟು ಮಾತ್ರ ನೀರಿದೆ ಎಂಬ ಆಘಾತಕಾರಿ ವಿಚಾರವನ್ನು ಅಂದಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹೊರಹಾಕಿದ್ದರು.
ಇದನ್ನೂ ಓದಿ: ಭೀಕರ ಬರ; 125ಕ್ಕೂ ಗ್ರಾಮಗಳಿಗೆ ಕುಡಿಯಲು ನೀರೊದಗಿಸುವ ಸೂಳೆಕೆರೆ ಒಡಲು ಖಾಲಿ ಖಾಲಿ! - ಏಷ್ಯಾದ ಎರಡನೇ ಅತಿದೊಡ್ಡ ಕೆರೆ
ಲೋಕಸಭಾ ಚುನಾವಣೆ:ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆದಿತ್ತು. ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ನಿಂದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಣದಲ್ಲಿದ್ದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ತಿವ್ರ ಕುತೂಹಲ ಮೂಡಿಸಿತ್ತು. ಆದರೆ, ಬಿಜೆಪಿ ಭದ್ರಕೋಟೆಯಾದ ದಾವಣಗೆರೆಯನ್ನು ಕಾಂಗ್ರೆಸ್ ಪಕ್ಷ ಭೇಧಿಸಿತು.
ಟಿಕೆಟ್ ವಂಚಿತ ವಿನಯ್ ಕುಮಾರ್:ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ.ವಿನಯ್ ಕುಮಾರ್ಗೆ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರಾಗಿ ಸ್ಪರ್ಧಿಸಿದ್ದರು. ಟಿಕೆಟ್ ತಪ್ಪಿದ್ದಕ್ಕಾಗಿ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದ್ದ ಅವರು, ಲೋಕಸಭಾ ಚುನಾವಣೆಯಲ್ಲಿ 40 ಸಾವಿರ ಮತಗಳನ್ನು ಪಡೆದು ಪರಾಜಿತರಾದರು.