ಕಾರವಾರ:ಮಳೆಗಾಲ ಆರಂಭವಾದ ಹಿನ್ನೆಲೆ ಅಕ್ರಮವಾಗಿ ಕಪ್ಪೆಗಳನ್ನು ಸಾಗಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಗೋವಾದ ಹೊಟೇಲ್ವೊಂದಕ್ಕೆ ಖಾಸಗಿ ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದರೂ ಎನ್ನಲಾದ 40ಕ್ಕೂ ಹೆಚ್ಚು ಬುಲ್ ಕಪ್ಪೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರವಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ನಗರದ ಕಾಳಿ ಸೇತುವೆ ಬಳಿ ಶಾಂತಾದುರ್ಗಾ ಎನ್ನುವ ಖಾಸಗಿ ಬಸ್ ಮೂಲಕ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಕಾರವಾರದಿಂದ ಗೋವಾದ ಮಡಗಾಂವ್ಗೆ ಸಾಗಿಸುತ್ತಿದ್ದ ಒಟ್ಟು 41 ಬುಲ್ ಕಪ್ಪೆಗಳನ್ನು ರಕ್ಷಣೆ ಮಾಡಿದ್ದು, ಗೋವಾ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ನಿರ್ವಾಹಕ ಜಾನು ಲೂಲಿಮ್ ಬಂಧಿಸಿದ್ದಾರೆ.
ಗೋವಾ ಜನರು ಸೇರಿ, ವಿದೇಶಿಗರಿಗೂ ಈ ಕಪ್ಪೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಇದಕ್ಕೆ 2 ರಿಂದ 3 ಸಾವಿರ ರೂ ದರ ಹೊಟೇಲ್‌ಗಳಲ್ಲಿ ಪಡೆಯಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ, ಅಂಕೋಲಾ ಸೇರಿದಂತೆ ಇತರ ಭಾಗದಿಂದ ಇವುಗಳನ್ನು ಕಳೆದ ಹಲವು ವರ್ಷಗಳಿಂದ ಮಳೆಗಾಲದ ವೇಳೆಗೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂ. ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಕಾರವಾರ, ಅಂಕೋಲಾ ಭಾಗದಲ್ಲಿ ಅತೀ ಹೆಚ್ಚಿದ್ದು, ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.
ಅರಣ್ಯ ಕಾಯ್ದೆ ಅಡಿ ಈ ಕಪ್ಪೆಗಳ ಬೇಟೆ ಮಾಡುವುದು ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಈ ಕಪ್ಪೆಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಕಪ್ಪೆಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತವೆ. ಕಳ್ಳ ಸಾಗಣೆದಾರರು ಹೊಲ, ಗಿಡಗಳ ಪೊದೆಗಳಲ್ಲಿ ಅಡಗಿರುವ ಕಪ್ಪೆಗಳನ್ನು ಹುಡುಕಿ ಹಿಡಿಯುತ್ತಾರೆ. ಬಳಿಕ ಗೋವಾಕ್ಕೆ ತೆಗೆದುಕೊಂಡು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಾರೆ. ಗಾತ್ರಗಳಿಗೆ ತಕ್ಕಂತೆ ವಿವಿಧ ಕಪ್ಪೆಗಳಿಗೆ ವಿವಿಧ ಬೆಲೆಗಳನ್ನು ನೀಡಿ ಖರೀದಿಸಲಾಗುತ್ತದೆ. ಗೋವಾದ ರೆಸ್ಟೋರೆಂಟ್‌ಗಳಲ್ಲಿ ವಿದೇಶಿಯರಿಗೆ ಪ್ರಿಯವಾದ ಆಹಾರ ಇದಾಗಿದ್ದು, ಹೆಚ್ಚು ಲಾಭ ತಂದುಕೊಡುತ್ತದೆ. ಈ ಕಾರಣದಿಂದಲೇ ಕಪ್ಪೆಗಳ ಅಕ್ರಮ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗೋವಾದಲ್ಲಿ ಜಂಪಿಂಗ್ ಚಿಕನ್: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿಗುವ ವಿವಿಧ ಜಾತಿಯ ಕಪ್ಪೆಗಳ ಖಾದ್ಯ ಅಂದ್ರೆ, ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ತುಂಬಾ ಇಷ್ಟವಾಗುತ್ತದೆ. ಗೋವಾದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಈ ಕಪ್ಪೆಗಳಿಗೆ ಬಹುಬೇಡಿಕೆಯಿದೆ. ಇಲ್ಲಿನ ಹೊಟೇಲ್‌ಗಳಲ್ಲಿ ಕಪ್ಪೆಯ ಖಾದ್ಯಗಳಿಗೆ ಜಂಪಿಂಗ್ ಚಿಕನ್ ಎನ್ನುವುದು ಪ್ರಚಲಿತವಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಳ್ಳ ಸಾಗಾಟಗಾರರ ಹಾವಳಿಯಿಂದಾಗಿ ವಿವಿಧ ಜಾತಿಗಳ ಕಪ್ಪೆಗಳು ಕಣ್ಮರೆಯಾಗಲು ಪ್ರಾರಂಭವಾಗುತ್ತದೆ. ಮುಂಗಾರು ಪ್ರಾರಂಭವಾದ ತಕ್ಷಣವೇ ಸುಮಾರು ಒಂದು ತಿಂಗಳ ಕಾಲ ನೀರು ತುಂಬುವ ಪ್ರದೇಶಗಳಲ್ಲಿ ಈ ಕಪ್ಪೆಗಳು ಕಾಣಸಿಗುತ್ತಿವೆ.
ಕಪ್ಪೆಗಳ ಕಳ್ಳ ಸಾಗಾಟ ತಡೆಗೆ ಒತ್ತಾಯ:ಆತಂಕಕಾರಿ ವಿಷಯ ಎಂದರೆ ಕಪ್ಪೆಗಳನ್ನು ಆಹಾರವಾಗಿ ಸೇವಿಸುವವರೂ ಹೆಚ್ಚಿರುವುದರಿಂದ ಅವುಗಳನ್ನು ಹಿಡಿದು ಹೊರ ರಾಜ್ಯಕ್ಕೆ ಕಳ್ಳ ಸಾಗಾಟ ಜಿಲ್ಲಾದ್ಯಂತ ನಡೆಯುತ್ತದೆ. ಮಾಂಸಕ್ಕಾಗಿ ಕಪ್ಪೆಗಳನ್ನು ಸಾಯಿಸುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುವ ಭಯ ಕಾಡುತ್ತಿದೆ. ಕಪ್ಪೆಗಳ ನಿರಂತರ ಮಾರಣ ಹೋಮದಿಂದ ಅವುಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಜೀವ ವೈವಿಧ್ಯತೆಗೆ ಧಕ್ಕೆಯುಂಟಾಗುವ ಆತಂಕ ಎದುರಾಗಿದೆ. ಇವುಗಳನ್ನು ಆಹಾರವನ್ನಾಗಿ ಬಳಸುವ ಇತರ ಜೀವಿಗಳು ಆಹಾರಕ್ಕಾಗಿ ಪರದಾಡುವ ಆತಂಕ ಸೃಷ್ಟಿಯಾಗಲಿದೆ. ಕಾನೂನಿಗೆ ವಿರುದ್ಧವಾಗಿ ಕಪ್ಪೆಗಳನ್ನು ಮಾಂಸದ ಖಾದ್ಯಕ್ಕೆ ಬಳಕೆ ಮಾಡುವುದನ್ನು ತಡೆಯಬೇಕು ಎನ್ನುವುದು ಪರಿಸರ ಪ್ರೇಮಿ ಅವಿನಾಶ್ ಒತ್ತಾಯಿಸಿದರು.
ಇದನ್ನೂ ಓದಿ:ಎಲ್ಲಾ ವಾಹನಗಳಿಗೆ ಹೆಡ್ ಲೈಟ್ ಅಳವಡಿಕೆ ಕಡ್ಡಾಯ: ಅಲೋಕ್ ಕುಮಾರ್ ಆದೇಶ - Head Light Mandatory Order