ಕರ್ನಾಟಕ

karnataka

ETV Bharat / state

ಕಾನೂನು ಬಾಹಿರವಾಗಿ ಗರ್ಭಪಾತ; ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ - High Court - HIGH COURT

ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸುತ್ತಿದ್ದ ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ ಮಾಡಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 25, 2024, 8:59 AM IST

ಬೆಂಗಳೂರು: ಕಾನೂನು ಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ವೈದ್ಯರೊಬ್ಬರು ಸೇರಿದಂತೆ ಐವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಪ್ರಕರಣದ ಸಂಬಂಧ ಬೆಂಗಳೂರಿನ ಶಾಂತಿನಗರದ ಡಾ.ಎಸ್.ಆದರ್ಶ್ ಹಾಗೂ ಮೈಸೂರು ತಾಲೂಕಿನ ಸಾಲುಂಡಿ ಗ್ರಾಮದ ಶಿವಲಿಂಗನಾಯಕ್ ಸಲ್ಲಿಸಿದ್ದ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಮೇಲುಕೋಟೆ ಹೋಬಳಿಯ ಮಹದೇಶ್ವರಪುರದ ಎಂ.ಎಸ್.ಕಿರಣ್, ಪಾಂಡವಪುರ ತಾಲೂಕು ಹೊಸಕೋಟೆಯ ಹೆಚ್​​.ಪಿ.ಅಖಿಲೇಶ್ ಹಾಗೂ ಕೆ.ಆರ್.ಪೇಟೆಯ ಶ್ರುತಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಆರೋಪಿಗಳ ವಿರುದ್ಧ ಅನಧಿಕೃತವಾಗಿ ಗರ್ಭಪಾತ ಮಾಡಿಸಿದ ಆಪಾದನೆಯಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇನ್ನು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹಾಗಾಗಿ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಹೊರುಗುತ್ತಿಗೆಯ ಮೇಲೆ ಸಹಾಯಕಳಾಗಿ (ಗ್ರೂಪ್-ಡಿ) ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ ಎಂಬಾಕೆ ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೇ 5ರಂದು ರಾತ್ರಿ 10.45 ವೇಳೆಯಲ್ಲಿ ಅಶ್ವಿನಿ ಅವರು ನಾಲ್ಕು ತಿಂಗಳ ಗರ್ಭೀಣಿಯಾಗಿದ್ದ ವಿವಾಹಿತೆಯೊಬ್ಬರಿಗೆ ವಸತಿ ಗೃಹದ ಗರ್ಭಪಾತ ಮಾಡಿಸುವ ನಿಟ್ಟಿನಲ್ಲಿ ಔಷಧ ನೀಡಿದ್ದರು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂಬಂಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ಬೆಟ್ಟಸ್ವಾಮಿ ಪಾಂಡವಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಅಶ್ವಿನಿಗೆ ನೆರವು ನೀಡುತ್ತಿದ್ದ ಆರೋಪವು ಶಿವಲಿಂಗನಾಯಕ್, ಎಂ.ಎಸ್.ಕಿರಣ್, ಪಾಂಡವಪುರ ತಾಲೂಕು ಹೊಸಕೋಟೆಯ ಹೆಚ್​.ಪಿ.ಅಖಿಲೇಶ್ ಹಾಗೂ ಶ್ರುತಿ ಅವರ ಮೇಲಿದೆ. ಇದರಲ್ಲಿ ತಲೆಮರೆಸಿಕೊಂಡಿದ್ದ ಶಿವಲಿಂಗನಾಯಕ್‌ಗೆ ನಿರೀಕ್ಷಣಾ ಜಾಮೀನು ಮತ್ತು ಬಂಧನಕ್ಕೆ ಒಳಗಾಗಿದ್ದ. ಉಳಿದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ ಮಂಡ್ಯದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೇ 29ರಂದು ಆದೇಶಿಸಿತ್ತು. ಇದರಿಂದ ಅವರು ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಎಚ್.ಬಿ ಕಾಲೋನಿಯ ಓವಂ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಹೊಸಕೋಟೆ ಠಾಣಾ ಪೊಲೀಸರಿಗೆ 2024ರ ಮಾ.21ರಂದು ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ಎಂ. ಸುನೀಲ್ ಕುಮಾರ್ ದೂರು ನೀಡಿದ್ದರು. ಈ ದೂರಿನಲ್ಲಿ ಆರೋಪಿಯಾಗಿರುವ ವೈದ್ಯ ಡಾ.ಎಸ್. ಆದರ್ಶ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2024ರ ಏ.6ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ರಾಹುಲ್​ ಗಾಂಧಿ ವಿರುದ್ಧದ ಹೇಳಿಕೆ ಪ್ರಸಾರ ಆರೋಪ: ಯೂಟ್ಯೂಬರ್ ಅಜಿತ್ ಭಾರ್ತಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ - High Court

ABOUT THE AUTHOR

...view details