ಬೆಂಗಳೂರು:"ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ಉಭಯ ಪಕ್ಷಗಳಿಗೂ ಬಲ ತಂದುಕೊಟ್ಟಿದೆ. ಈ ಮೈತ್ರಿ ಮುಂದುವರೆದರೆ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣ ಆಗಲಿದೆ" ಎಂದು ಚಿಕ್ಕಬಳ್ಳಾಪುರದ ನೂತನ ಸಂಸದ ಡಾ.ಸುಧಾಕರ್ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ನೂತನ ಸಂಸದರು ಇಂದು ಆಗಮಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾದ ನೂತನ ಸಂಸದರು (ETV Bharat) ಚಿತ್ರದುರ್ಗ ನೂತನ ಸಂಸದ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ಸಂಸದ ಡಾ.ಸುಧಾಕರ್ ಹಾಗು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಕಚೇರಿಗೆ ಭೇಟಿ ನೀಡಿದರು. ನೂತನ ಸಂಸದರನ್ನು ಬಿಜೆಪಿ ಕಚೇರಿ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದರು. ಚುನಾವಣಾ ಪ್ರಚಾರದ ಮೂಲಕ ಅಗತ್ಯ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು. ವಿಜಯೇಂದ್ರ ಸಿಹಿ ವಿತರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸುಧಾಕರ್, "ಬಿಜೆಪಿ ರಾಜ್ಯ ವರಿಷ್ಠರು, ಮುಖಂಡರು ಹಾಗು ಕೇಂದ್ರದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸೋತಿದ್ದರೂ ಪಕ್ಷ ಅವಕಾಶ ನೀಡಿದ್ದರಿಂದ ಇದೇ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದೇನೆ. ಅದೇ ಜಿಲ್ಲೆಯ ಜನರು ಗೆಲುವಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಡೀ ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಎರಡೂ ಪಕ್ಷಕ್ಕೂ ಬಲ ತಂದುಕೊಟ್ಟಿದೆ" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾದ ನೂತನ ಸಂಸದರು (ETV Bharat) ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸವಾಲಿನ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸುಧಾಕರ್, "ನಾನು ಅಷ್ಟು ಪ್ರಬುದ್ಧ ರಾಜಕಾರಣಿ ಬಗ್ಗೆ ಮಾತನಾಡಲ್ಲ. ಒಂದು ವರ್ಷದ ಅವಧಿಯಲ್ಲಿ ಜನ ಏನು ಕಳೆದುಕೊಂಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಮನೆ ಮಗ ಇದ್ದಾಗ ಹೇಗಿತ್ತು, ಈಗ ಹೇಗಿದೆ ಅನ್ನೋದು ಜನರಿಗೆ ಗೊತ್ತಾಗಿದೆ. ಒಂದು ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ಕಳೆದುಕೊಂಡಿರುವ ನನಗೆ ಈಗ ಎಂಟು ಕ್ಷೇತ್ರಕ್ಕೆ ಕೆಲಸ ಮಾಡುವ ಸೌಭಾಗ್ಯ ದೊರೆತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
"ನನ್ನ ಕ್ಷೇತ್ರದಲ್ಲಿ ಇಬ್ಬರು ಸಚಿವರಿದ್ದಾರೆ. ಒಬ್ಬರು ಕೇಂದ್ರ ಮಂತ್ರಿಯೂ ಆಗಿದ್ದರು. ಇದೆಲ್ಲದರ ಹೊರತಾಗಿ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಯಿತು. ಘಟಾನುಘಟಿ ನಾಯಕರಿದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದರು. ಡಬಲ್ ಡಿಜಿಟ್ ಬರುತ್ತದೆ ಅಂದಿದ್ದರು. ಇದು ಸರ್ಕಾರದ ವೈಫಲ್ಯ ಅಲ್ಲವೇ? ಕಡಿಮೆ ಸೀಟು ಬಂದಿರೋದಕ್ಕೆ ಬಿಜೆಪಿಯನ್ನು ಪ್ರಶ್ನೆ ಮಾಡುವುದಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಪ್ರಶ್ನೆ ಮಾಡಬೇಕು" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾದ ನೂತನ ಸಂಸದರು (ETV Bharat) ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರಕ್ಕೆ, "ಯಾವ ವಿಚಾರಕ್ಕೆ ಹಲ್ಲೆ ಆಗಿದೆ ಎಂದು ಗೊತ್ತಿಲ್ಲ. ರಾಜಕೀಯ ಕಾರಣವಾಗಿ ಹಲ್ಲೆ ಮಾಡಿದ್ದರೆ ನಾವು ತಕ್ಕ ಉತ್ತರ ಕೊಡುತ್ತೇವೆ" ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂತನ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, "ಚುನಾವಣೆಯ ಗೆಲುವಿಗಾಗಿ ಮಾಧ್ಯಮದವರಿಗೂ ಧನ್ಯವಾದಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದವರು ಜವಾಬ್ದಾರಿಯಿಂದ ಮಾಹಿತಿ ನೀಡಿದ್ದೀರಿ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜನ ಮತ ನೀಡಿದ್ದಾರೆ. ಈ ಗೆಲುವನ್ನು ಬಿಜೆಪಿ-ಜೆಡಿಎಸ್ ಮತದಾರರಿಗೆ ಅರ್ಪಿಸುತ್ತೇನೆ. ಇದು ಮತದಾರರ ಗೆಲುವು. ಜನಶಕ್ತಿಗಿಂತ ಬೇರೆ ಶಕ್ತಿ ಇಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿ, ಧನ್ಯವಾದ ಸಲ್ಲಿಸಲು ಬಂದೆ. ನಾಳೆ ದೆಹಲಿಗೆ ತೆರಳಲಿದ್ದೇನೆ. ಎಲ್ಲಾ ಸಂಸದರೂ ಹೋಗುತ್ತಿದ್ದೇವೆ" ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾದ ನೂತನ ಸಂಸದರು (ETV Bharat) ಇದನ್ನೂ ಓದಿ:ನನ್ನ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ ಜೆಡಿಎಸ್ ಕೂಡ ಅಷ್ಟೇ ಕಾರಣ: ವಿ. ಸೋಮಣ್ಣ - V Somanna