ಬೆಳಗಾವಿ:"ಖಾನಾಪುರ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವೇ ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸುವುದು. ಈ ಎರಡೇ ಅವಕಾಶಗಳು ಇರೋದು" ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸತೀಶ ಜಾರಕಿಹೊಳಿ ಹೇಳಿದರು.
ಖಾನಾಪುರ ತಾಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಖಾನಾಪುರ ಪ್ರವಾಸಿ ಮಂದಿರದಲ್ಲಿ ಖಾನಾಪುರ ಕಾಡಂಚಿನ ಗ್ರಾಮಸ್ಥರ ಸಮಸ್ಯೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ ಉತ್ತರಿಸಿದರು. "ಅರಣ್ಯ ಇಲಾಖೆಯಿಂದ ಕಾನೂನು ಸಮಸ್ಯೆಯಿದೆ. ಹೊಸ ರಸ್ತೆ ನಿರ್ಮಿಸಲು ಅವರು ಅವಕಾಶ ಕೊಡುವುದಿಲ್ಲ. ನೂರಾರು ವರ್ಷಗಳಿಂದ ಅಲ್ಲಿ ಜನರು ವಾಸವಿದ್ದಾರೆ. ಈ ಸಂಬಂಧ ಮೊನ್ನೆ ಅರಣ್ಯ ಸಚಿವರ ಜೊತೆಗೆ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ಸಚಿವರನ್ನು ಒಮ್ಮೆ ಬೆಳಗಾವಿಗೆ ಕರೆಸಿ ಚರ್ಚಿಸುತ್ತೇವೆ" ಎಂದು ಹೇಳಿದರು.
ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, "ಆ ಮಹಿಳೆಗೆ ಬ್ರೈನ್ ಸ್ಟ್ರೋಕ್ ಆಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ನೀಡಿದರೂ ಬದುಕಲಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಇರಲಿಲ್ಲ. ಆಂಬ್ಯುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ. ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದೆ. ಇದು ಮೂರ್ನಾಲ್ಕು ಇಲಾಖೆಗಳಿಗೆ ಸಂಬಂಧಪಟ್ಟ ವಿಷಯವಾಗಿದೆ. ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರದಾಡುವ ಸಮಸ್ಯೆ ಇದೆ. ಶೇ.80ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರ ಮಾಡಬಹುದು" ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
"ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಖಾನಾಪುರದಿಂದ ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಿಸುತ್ತೇವೆ" ಎಂದು ಹೇಳಿದರು.
ಪ್ರವಾಹ ನಿಯಂತ್ರಣದಲ್ಲಿದೆ:"ಜಿಲ್ಲೆಯಲ್ಲಿ ಅಷ್ಟೊಂದು ಅಪಾಯಕಾರಿ ಮಟ್ಟದಲ್ಲಿ ಪ್ರವಾಹವಿಲ್ಲ. ಎಲ್ಲವೂ ನಿಯಂತ್ರಣದಲ್ಲಿದೆ. ನಿನ್ನೆ ಚಿಕ್ಕೋಡಿ ಭಾಗಕ್ಕೆ ಭೇಟಿ ನೀಡಿ ಬಂದಿದ್ದೇನೆ. ಕೊಯ್ನಾ ಜಲಾಶಯದಿಂದ ನೀರು ಬಿಡುವ ಪ್ರಮಾಣ ನೋಡುತ್ತೇವೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ" ಎಂದು ಸತೀಶ ಜಾರಕಿಹೊಳಿ ಹೇಳಿದರು.