ಶಿವಮೊಗ್ಗ: ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಇಡಗುಂಜಿ ಗಣಪನಂತೆ, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಭಕ್ತರು ಬೇಡಿದ್ದನ್ನು ಕೊಡುವ ಇಡಗುಂಜಿ ಗಣೇಶನಿದ್ದಾನೆ. ಶಿವಮೊಗ್ಗದ ಹೊರವಲಯ ತ್ರಿಮೂರ್ತಿ ನಗರದಲ್ಲಿ ಶಿಕಾರಿಪುರ ರಸ್ತೆಗೆ ಅಂಟಿಕೊಂಡಂತೆ ಈ ದೇವಾಲಯವಿದೆ.
ದೇಗುಲವನ್ನು ತ್ರಿಮೂರ್ತಿ ನಗರದ ನಿವಾಸಿ ವೀರದಾಸ ಎಂಬವರು ಸುಮಾರು 70 ವರ್ಷಗಳ ಹಿಂದೆ ನಿರ್ಮಿಸಿದ್ದರು. ಮಹಾನ್ ದೈವಭಕ್ತರಾಗಿದ್ದ ವೀರದಾಸ ಪ್ರತಿಯೊಂದು ದೇವಾಲಯಗಳಿಗೂ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಂತೆ. ಒಮ್ಮೆ ಇಡಗುಂಜಿಯಲ್ಲಿ ಗಣಪನ ದರ್ಶನ ಪಡೆದು ವಾಪಸಾಗಿದ್ದ ಅವರಿಗೆ ಇದ್ದಕ್ಕಿದ್ದಂತೆ ದೈವ ಪ್ರೇರಣೆಯಾಗಿ ಈ ದೇವಾಲಯವನ್ನು ಇಡಗುಂಜಿ ಮಾದರಿಯಲ್ಲಿಯೇ ಕಟ್ಟಿಸಿದ್ದಾರೆ. ಇಡಗುಂಜಿ ಮಾದರಿಯಲ್ಲಿಯೇ ಗಣಪನನ್ನು ಮಾಡಿಸಿ, ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬಂದಿದ್ದರು. ಈಗ ವೀರದಾಸ ದೈವಾಧೀನರಾಗಿದ್ದು, ಮೊಮ್ಮಗ ದೇವಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಕೇಂದ್ರ: ಶಿವಮೊಗ್ಗದ ಇಡಗುಂಜಿ ಗಣಪ, ಭಕ್ತರ ಇಷ್ಟಾರ್ಥವನ್ನು ಈಡೇರಿಸಿಕೊಂಡು ಬಂದಿದ್ದಾನೆ. ಈ ಗಣಪನಲ್ಲಿ ಬೇಡಿಕೊಂಡ ಹರಕೆಗಳೆಲ್ಲವೂ ಈಡೇರುವುದು ಇಲ್ಲಿನ ವಿಶೇಷತೆ. ತಮ್ಮ ಇಷ್ಟಾರ್ಥ ಈಡೇರಿದರೆ ಭಕ್ತರು ಇಲ್ಲಿಗೆ ಬಂದು ಸರಳವಾಗಿ, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಕೆಲವರು ಬೆಣ್ಣೆ ಅಲಂಕಾರ ಮಾಡುತ್ತಾರೆ. ಇವೆರಡೂ ಈ ದೇವರಿಗೆ ಅತಿ ಪ್ರಿಯವಾದ ಸೇವೆಗಳು. ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಭಾಗಕ್ಕೆ ಓಡಾಡುವವರು ಇಲ್ಲಿನ ಖಾಯಂ ಭಕ್ತರು.