ಬೆಳಗಾವಿ: ಜಗತ್ತಿನ ಆರು ಭಾಗದಲ್ಲಿ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿದ ಭಾರತ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ದೇಶದ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್–ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೇಡಿಷನಲ್ ಮೆಡಿಸಿನ್(ಐಸಿಎಂಆರ್–ಎನ್‌ಐಟಿಎಂ)ನಲ್ಲಿ ಸೋಮವಾರ ನಡೆದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶ ಮತ್ತು ಸಮಾಜಕ್ಕಾಗಿ ಸಮರ್ಪಿತ ಸೇವೆ ಸಲ್ಲಿಸಿದ ಐಸಿಎಂಆರ್–ಎನ್‌ಐಟಿಎಂ ಶ್ಲಾಘನೀಯ. ಕೋವಿಡ್–19 ನಿರ್ವಹಣೆಯಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ತಪಾಸಣೆ, ಲಸಿಕೆ ಅಭಿವೃದ್ಧಿ ಮೂಲಕ ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿ ಸೇವೆ ಸಲ್ಲಿಸುವವರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಪಾರಂಪರಿಕ ಔಷಧಿ: ಕೀಲುನೋವು, ಮಧುಮೇಹ ಮತ್ತು ಅತಿಸಾರ ಕಾಯಿಲೆಗಳು ವೈದ್ಯಲೋಕಕ್ಕೆ ಸವಾಲಾಗಿವೆ. ಕೀಲು ನೋವಿನ ಸಮಸ್ಯೆಗೆ ನಾವು ಪಾರಂಪರಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಮಧುಮೇಹಕ್ಕೆ ಸಾವಯವ ಪದ್ಧತಿಯಲ್ಲೇ ಪರಿಹಾರ ಹುಡುಕುತ್ತಿದ್ದೇವೆ. ರಾಸಾಯನಿಕಗಳನ್ನು ಬಳಕೆ ಮಾಡದೇ, ಪಾರಂಪರಿಕ ಔಷಧಗಳಿಂದಲೇ ಈ ಕಾಯಿಲೆಗಳನ್ನು ಗುಣಪಡಿಸಬಹುದು. ಇನ್ನು ಅತಿಸಾರ ಕಾಯಿಲೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ದುರ್ಬಲ ವರ್ಗದವರಿಗೆ ಚಿಕಿತ್ಸೆ ಲಭಿಸಿದರೆ, ಅದು ಬದಲಾವಣೆಗೆ ನಾಂದಿ ಹಾಡುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ ಅಭಿಪ್ರಾಯ ಪಟ್ಟರು.