ಕರ್ನಾಟಕ

karnataka

ETV Bharat / state

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ: ಸ್ನೇಹಮಯಿ ಕೃಷ್ಣ - MUDA CASE

ಯುದ್ಧದಲ್ಲಿ ಸೈನಿಕ ಶಸ್ತ್ರವನ್ನು ಕೆಳಗಿಟ್ಟ ಎಂದ ಮಾತ್ರಕ್ಕೆ, ಯುದ್ಧ ನಿಲ್ಲಿಸಿದ ಎಂದರ್ಥವಲ್ಲ. ಆ ಶಸ್ತ್ರ ಬದಲು ಬೇರೆ ಶಸ್ತ್ರದ ಆಯ್ಕೆಯಾಗಿದೆ ಎಂದರ್ಥ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

Social Activist Snehamayi Krishna
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Feb 11, 2025, 7:28 AM IST

ಮೈಸೂರು: "ಮುಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಬದಲಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನಾನೇ ವಾದ ಮಾಡಿ, ಅದಷ್ಟು ಬೇಗ ಮುಡಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷ್ಯಾಧಾರಗಳು ನನ್ನಲಿವೆ. ನಾನು ಎಂದಿಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ" ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಮುಡಾ 50:50 ಅನುಪಾತದಲ್ಲಿ ಪಡೆದಿರುವ ಸೈಟ್​ಗಳ ಮಾಹಿತಿ ನನ್ನ ಬಳಿಯಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷಿ ಆಧಾರಗಳಿವೆ. ನನ್ನ‌ 15 ವರ್ಷದ ಕಾನೂನಿನ ಹೋರಾಟದ ಬದುಕಿನಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿದ್ದೇನೆ. ಹೀಗಾಗಿ ನನ್ನ ಬಳಿ ಇರುವ ಸಾಕ್ಷಿ ಮತ್ತು ನನ್ನ‌ ಅನುಭವದ ಮೂಲಕ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇನೆ." ಎಂದರು.

ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (ETV Bharat)

"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐಗೆ ವಹಿಸುವ ವಿಷಯದಲ್ಲಿ ನ್ಯಾಯಾಲಯದಲ್ಲಿ ನಾಲ್ಕು ತಿಂಗಳ ಹೋರಾಟ ಮಾಡಿದ್ದೇನೆ. ಮತ್ತೆ ಅರ್ಜಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದರೆ, ಮತ್ತಷ್ಟು ತಿಂಗಳು ವ್ಯರ್ಥವಾಗಬಹುದು ಎಂಬ ಕಾರಣಕ್ಕೆ ಮೇಲ್ಮನವಿ ಸಲ್ಲಿಸುವ ನಿರ್ಧಾರದಿಂದ ಹಿಂದಿ ಸರಿದಿದ್ದೇನೆ. ಲೋಕಾಯುಕ್ತ ಸಲ್ಲಿಸಿದ ವರದಿಯನ್ನು ಇಟ್ಟುಕೊಂಡು ನನ್ನ ಬಳಿ‌ ಇರುವ ದಾಖಲಾತಿಗಳ ಸಹಾಯದಿಂದ ಇನ್ನೂ ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಬಹುದು. ಹೀಗಾಗಿ ನನ್ನ ಹೋರಾಟದ ಸ್ವರೂಪವನ್ನು ಬದಲಾವಣೆ ‌ಮಾಡಿಕೊಂಡಿದ್ದೇನೆ" ಎಂದು ಹೇಳಿದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಾನೇ ವಾದ ಮಾಡುತ್ತೇನೆ: "ಲೋಕಾಯುಕ್ತ ಅಧಿಕಾರಿಗಳು ವರದಿಯನ್ನು ಸಲ್ಲಿಸಿದರೆ‌, ನಾನೇ ಖುದ್ದಾಗಿ ದಾಖಲಾತಿಗಳನ್ನು ಒದಿಗಿಸಿ, ನನ್ನ ಪ್ರಕರಣವನ್ನು ನಾನೇ ವಾದ ಮಾಡುತ್ತೇನೆ.‌ ಕಾನೂನಿನ ಜ್ಞಾನ ಹೊಂದಿರುವ ವ್ಯಕ್ತಿಯು ಎದುರಾಳಿ ಎಷ್ಟೇ ದೂಡ್ಡ ಹುದ್ದೆಯಲ್ಲಿ ಇದ್ದರೂ ಶಿಕ್ಷೆ ಕೊಡಿಸಬಹುದು ಎಂಬ ಸಂದೇಶವನ್ನು ಈ ಮೂಲಕ ರಾಜ್ಯದ ಜನತೆಗೆ ತಿಳಿಸುವುದೇ ನನ್ನ‌ ಉದ್ದೇಶವಾಗಿದೆ. ಲೋಕಾಯುಕ್ತ ವರದಿ ಸಲ್ಲಿಸಿದ ನಂತರ ಅದರ ಅಂಶಗಳನ್ನು ಪರಿಗಣಿಸಿ ಮುಂದಿನ ಹೋರಾಟ ನಿರ್ಧಾರ ಮಾಡುತ್ತೇನೆ" ಎಂದರು.

ನಾನು ಯಾವುದೇ ಕಾರಣಕ್ಕೂ ನನ್ನ ಹೋರಾಟ ನಿಲ್ಲಿಸುವುದಿಲ್ಲ‌: "ಯುದ್ಧದಲ್ಲಿ ಸೈನಿಕ ಶಸ್ತ್ರವನ್ನು ಕೆಳಗೆ ಇಟ್ಟ ಎಂದ ಮಾತ್ರಕ್ಕೆ, ಯುದ್ಧ ನಿಲ್ಲಿಸಿದ ಎಂದು ಅರ್ಥವಲ್ಲ. ಆ ಶಸ್ತ್ರ ಬದಲು ಬೇರೆ ಶಸ್ತ್ರದ ಆಯ್ಕೆಯಾಗಿದೆ ಎಂದು ಅರ್ಥ. ಅದೇ ರೀತಿ ನನ್ನ ಹೋರಾಟದ ಸ್ವರೂಪ ಬದಲಾವಣೆ ಮಾಡಿದ್ದೇನೆ ಅಷ್ಟೇ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ನನ್ನ‌ ಹೋರಾಟ ಬಗ್ಗೆ ತಿಳಿಯುತ್ತದೆ" ಎಂದರು.

ಇಡಿ ತನಿಖೆ: "ಇಡಿ ಮುಡಾ ಹಗರಣದ ಬಗ್ಗೆ ಸಮಗ್ರವಾಗಿ ತನಿಖೆ‌ ಮಾಡುತ್ತಿದೆ, ಮೊದಲ ಬಾರಿ ವಿಚಾರಣೆಗೆ ಕರೆದಾಗ ಸಾಕಷ್ಟು ಮಾಹಿತಿ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ:ಹೋರಾಟ ಮುಂದುವರಿಯಲಿದೆ, ಮುಂದಿನ ವಾರ ಸುಪ್ರೀಂಗೆ ಅರ್ಜಿ: ಸ್ನೇಹಮಯಿ ಕೃಷ್ಣ

ABOUT THE AUTHOR

...view details