ರಾಜ್ಯವನ್ನು ಲೂಟಿ ಮಾಡುವುದನ್ನು ತಪ್ಪಿಸಲೆಂದೇ ಕುಮಾರಸ್ವಾಮಿಗೆ ಮೋದಿ ಜೊತೆಗೆ ಹೋಗಲು ಹೇಳಿದೆ: ಹೆಚ್ ಡಿ ದೇವೇಗೌಡ ಮೈಸೂರು:ನನ್ನ ತಲೆಯಲ್ಲಿ ಬುದ್ಧಿ ಇಲ್ಲದೇನೆ ಕುಮಾರಸ್ವಾಮಿಯನ್ನು ನೀನು ಮೋದಿ ಜೊತೆಗೆ ಹೋಗು ಅಂತ ಹೇಳಿಲ್ಲ. ಈ ರಾಜ್ಯವನ್ನು ಲೂಟಿ ಮಾಡುವುದನ್ನು ತಪ್ಪಿಸುವ ಸಲುವಾಗಿ ನೀನು ಮೋದಿ ಅವರೊಂದಿಗೆ ಹೋಗು ಎಂದು ಹೇಳಿ, ನನ್ನ ಅನುಮತಿಯನ್ನು ಕೊಟ್ಟಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಈಗ ಇಬ್ಬರು ಮಹಾನುಭಾವರು ರಾಜ್ಯ ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ. ನರೇಂದ್ರ ಮೋದಿಯವರ ಬಗ್ಗೆ ಲಘುವಾಗಿ ಕೇವಲ 6 ಕೋಟಿ ಜನತೆಯ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. 150 ಕೋಟಿ ಜನರ ಪ್ರಧಾನಮಂತ್ರಿ ಬಗ್ಗೆ ಒಬ್ಬ ಮುಖ್ಯಮಂತ್ರಿ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಯಸ್ಸಿನಲ್ಲಿ ನಾನು ದಿನಕ್ಕೆ 4 ಸಭೆಗಳನ್ನು ಮಾಡ್ತೇನೆ. ರಾಜ್ಯದಲ್ಲಿ ಜೆಡಿಎಸ್ನ 3 ಸೀಟು ಮಾತ್ರವಲ್ಲ, ಎನ್ಡಿಎದಿಂದ 28 ಸೀಟುಗಳನ್ನು ಗೆಲ್ಲುತ್ತೇವೆ. ತುಮಕೂರು, ರಾಯಚೂರು, ಬೀದರ್ ಎಲ್ಲೆಡೆಯೂ ಗೆಲ್ಲಬೇಕು. ಯಡಿಯೂರಪ್ಪನವರೇ ಇಡೀ ರಾಜ್ಯದಲ್ಲಿ ನೀವು ಎಲ್ಲಿ ಕರೆದರೂ ಅಲ್ಲಿಗೆ ಬಂದು ಚುನಾವಣಾ ಪ್ರಚಾರವನ್ನು ಮಾಡುತ್ತೇನೆ. ಆ ಶಕ್ತಿ ನನ್ನಲ್ಲಿದೆ. ಇಡೀ ರಾಜ್ಯದಲ್ಲಿ ಎನ್‌ಡಿಎಯಿಂದ ಕನಿಷ್ಠ 24 ಸ್ಥಾನಗಳನ್ನು ಗೆದ್ದು ಮೋದಿ ಅವರಿಗೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ 64 ವರ್ಷದ ರಾಜಕೀಯ ಜೀವನದಲ್ಲಿ ಬೆಂಗಳೂರು ನಗರ, ಬಿಡಿಎ, ಬಿಬಿಎಂಪಿ ಸೇರಿದಂತೆ ನೀರಾವರಿ ಇಲಾಖೆಯನ್ನು ಬಾಚು, ಬಾಚು ಬಾಚಿದ್ದಾರೆ. ಬಿಜೆಪಿಯನ್ನು ಸೋಲಿಸಲು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಕ್ಕೆ ನಮ್ಮ ಸಂಪತ್ತು ಹೋಗಿದೆ. ಕರ್ನಾಟಕದ ಜನತೆಯ ಸಂಪತ್ತನ್ನು ಕೊಳ್ಳೆ ಹೊಡೆಯುವ ಐಎನ್‌ಡಿಐಎ ಅನ್ನು ಸೋಲಿಸಲೇಬೇಕು. ದೇವೇಗೌಡರು ಈ 91ನೇ ವಯಸ್ಸಿನಲ್ಲಿ ಬಿಜೆಪಿಯ ಜೊತೆಗೆ ಹೋಗಿದ್ದಾರೆ ಎಂಥಾ ದುರ್ದೈವ ಎಂದು ಟೀಕಿಸಿದ್ದಾರೆ. ಆದರೆ, ಯಾರು ಈ ದೇಶವನ್ನು ನಡೆಸುತ್ತಿದ್ದಾರೋ, ದೇಶಕ್ಕೆ ಕೀರ್ತಿ ತಂದಂತಹ ವ್ಯಕ್ತಿ ನನ್ನ ಪಕ್ಕದಲ್ಲಿ ಕುಳಿತಿರುವ ನರೇಂದ್ರ ಮೋದಿ ಅವರಿದ್ದಾರೆ. ಪ್ರಧಾನಿಗೆ ನಾನು ಎದ್ದು ನಿಂತು ಗೌರವ ಕೊಡಬೇಕು ಅಂತ ಇದ್ದೆ. ಮಂಡಿ ನೋವಿದೆ ಆಗಿಲ್ಲ. ಮೋದಿಯವರು ಕ್ಷಮಿಸಿಬೇಕು ಎಂದು ಹೇಳಿದರು.
ಇದನ್ನೂ ಓದಿ:ಯಾವ ಆರ್ಎಸ್ಎಸ್ ನಾಯಕರು ಹೇಳಿದರೂ ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲವೆಂದು ಮೋದಿ ಹೇಳಬೇಕಾಗಿತ್ತು: ಸಿದ್ದರಾಮಯ್ಯ - Siddaramaiah