ಹಾವೇರಿ: "ನನ್ನ ರಾಜಕಾರಣದ ಜೀವನದಲ್ಲಿ ಹಲವು ಕ್ಷೇತ್ರಗಳನ್ನು ಸುತ್ತಿದ್ದೇನೆ. ಆದರೆ ಹಾವೇರಿ ಜಿಲ್ಲೆಯ ಶಿಗ್ಗಾಂವ್, ಸವಣೂರಿನಂತಹ ಜನರು ನನಗೆ ಎಲ್ಲೂ ಸಿಗಲ್ಲ" ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಶಿಗ್ಗಾಂವ್ನಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ವೇದಿಕೆ ಮೇಲೆ ಕುಳಿತಿರುವವರು ನಮ್ಮ ನಾಯಕರು. ವೇದಿಕೆ ಮುಂಭಾಗ ಕುಳಿತಿರುವವರು ನಾಯಕರನ್ನು ಸೃಷ್ಟಿಸುವ ಜನ, ನಮ್ಮ ಮಹಾನಾಯಕರು. ಲೋಕಸಭೆ ಟಿಕೆಟ್ ಘೋಷಣೆಯ ಬಳಿಕ ಕ್ಷೇತ್ರದ ಜನರು ನೋವಿನಿಂದ ಕಣ್ಣೀರು ಹಾಕಿದ್ದರು. ಅವರನ್ನು ಕಂಡು ನಾನು ಅಂದು ಕಣ್ಣೀರು ಹಾಕಿದ್ದೆ. ಶಿಗ್ಗಾಂವ್ ಕ್ಷೇತ್ರದ ಜನರ ಬಳಿ ರಾಜಕೀಯ ಮೀರಿ ನನ್ನ ಸಂಬಂಧವಿದೆ. ಚುನಾವಣೆ, ಗೆದ್ದ ಪ್ರತಿನಿಧಿ ಯಾವ ರೀತಿ ವರ್ತಿಸಬೇಕು? ಜನ ಹೇಗಿರಬೇಕು ಅನ್ನೋದನ್ನು ತೋರಿಸುತ್ತದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಕ್ಷೇತ್ರದ ಜನರ ಈ ಪ್ರೀತಿ, ವಿಶ್ವಾಸ ಹೇಗೆ ಬೆಳೆಯಿತು ಅನ್ನೋದನ್ನು ಯೋಚಿಸಿದರೆ ನನಗೆ ಆಶ್ಚರ್ಯವಾಗುತ್ತದೆ. ಅಧಿಕಾರ ಹುಡುಕಿಕೊಂಡು ಹೋದವನು ನಾನಲ್ಲ. ಈ ಕ್ಷೇತ್ರಕ್ಕಾಗಿ ಹಲವರು ಆಕಾಂಕ್ಷಿಗಳಿದ್ದರು. ದೆಹಲಿಗೆ ಹೋದಾಗ ನಮ್ಮ ಹೈಕಮಾಂಡ್ ನಾಯಕರು ಮಾತನಾಡಿ, ಚುನಾವಣೆಗೆ ನಿಲ್ಲುವಂತೆ ಹೇಳಿದರು. ಆದರೆ ನಾನು ಅಂದು ಈಶ್ವರಪ್ಪರ ಮಗನಿಗೆ ಟಿಕೆಟ್ ಕೂಡಿ ಅಂತ ಹೇಳಿದ್ದೆ. ಶಾಸಕ ಸ್ಥಾನ ಶಾಶ್ವತ ಅಲ್ಲ. ಸಹೋದರನ ಸ್ಥಾನ ಶಾಶ್ವತ" ಎಂದರು.
"ಜೀವನದ ಕೊನೆಯ ಉಸಿರು ಇರುವವರೆಗೂ ನಾನು ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಅಧಿಕಾರ ಇರದೇ ಇದ್ದರೂ ನಿಮ್ಮ ಸೇವೆ ಮಾಡುತ್ತೇನೆ. ಉಸಿರು ಇರುವವರೆಗೂ ಸೇವೆ ಮಾಡೋದು ಅಷ್ಟೇ ಅಲ್ಲ, ಜೀವನದ ಕೊನೆಯ ಉಸಿರು ಹೋದ ಮೇಲೂ ಇಲ್ಲೇ ಮಣ್ಣಾಗುತ್ತೇನೆ" ಎಂದು ಬೊಮ್ಮಾಯಿ ಕಣ್ಣೀರು ಹಾಕಿದರು.
"ಪ್ರಹ್ಲಾದ್ ಜೋಶಿ ರಾಜಕೀಯ ಕುಟುಂಬದಿಂದ ಬಂದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸಂಸದರಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಜೀವನದಲ್ಲಿ ಜೋಶಿ ಕಪ್ಪುಚುಕ್ಕೆ ಇಲ್ಲದೇ ಇರುವ ಹಾಗೆ ಕೆಲಸ ಮಾಡಿದ್ದಾರೆ. ಒಬ್ಬ ಸಂಸದ ಕ್ಷೇತ್ರದ ಎಲ್ಲ ಶಾಲೆಗಳಿಗೆ ಬಣ್ಣ ಹಚ್ಚಿದ ಉದಾಹರಣೆ ಇದೆಯಾ? ಹಾಗಾಗಿ ಈ ಕ್ಷೇತ್ರದ ಜನರು ನನಗೆ ತೋರಿಸಿದ ಪ್ರೀತಿಯನ್ನು ಅವರಿಗೂ ತೋರಿಸಿ. ನಾನು ಈ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ನೀವು ನೀಡಿದ ರೊಟ್ಟಿ, ಉಪ್ಪಿಟ್ಟು ಎಲ್ಲವನ್ನೂ ತಿನ್ನುತ್ತೇನೆ. ನನ್ನ ರಾಜಕೀಯ ಬದುಕಿಗೆ ಒಂದು ಶಕ್ತಿ ನೀಡಿದ ದೇವರು ಈ ಕ್ಷೇತ್ರದ ಜನರು. ನೀವೆಲ್ಲಾ ನನಗೆ ಪರಮಾತ್ಮನಿದ್ದ ಹಾಗೆ" ಎಂದು ಹೇಳಿದರು.
"ಯಾರನ್ನು ಮರೆತರೂ, ದೇವರನ್ನು ಮರೆಯಲು ಸಾಧ್ಯವಿಲ್ಲ. ರೊಟ್ಟಿ, ಅನ್ನ, ನವಣಕ್ಕಿ ಅನ್ನ ಮಾಡಿ ಪ್ರೀತಿಯಿಂದ ಉಣಿಸಿದ್ದೀರಿ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಈ ಸಭೆ ನನಗೆ ವಿದಾಯದ ಸಭೆಯಲ್ಲ. ಜೋಶಿಯವರಿಗೆ ಶಕ್ತಿ ನೀಡುವ ಸಭೆ. ನನ್ನನ್ನು ದೆಹಲಿಯಲ್ಲಿ ನಿಲ್ಲುವಂತೆ ಮಾಡುವ ಸಭೆ. ನಿಮ್ಮ ಪ್ರಾರ್ಥನೆಯಿಂದ ನಾನು ದೇಶದ ಪ್ರತಿನಿಧಿಯಾಗಬೇಕು ಎಂದು ಆಶೀರ್ವಾದ ಮಾಡಿ. ಈ ಸಮಯವನ್ನು ನಾವು ಬಳಸಿಕೊಂದು ಜೋಶಿಯವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸೋಣ" ಎಂದು ಮನವಿ ಮಾಡಿದರು.
ಇದನ್ನೂ ಓದಿ:ದಾವಣಗೆರೆ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ 3 ದಿನ ಗಡುವು ಕೊಟ್ಟ ಮುಖಂಡರು