ಕರ್ನಾಟಕ

karnataka

ETV Bharat / state

ನಾನೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ, ಸರ್ಕಾರದ ಮೇಲಿನ ಆರೋಪ ಸಾಬೀತುಪಡಿಸಲಿ: ಡಿಸಿಎಂ ಡಿಕೆಶಿ - JAYANAGAR GRANT ISSUE

ನಾನೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ, ಸರ್ಕಾರದ ಮೇಲಿನ ಆರೋಪ ಸಾಬೀತುಪಡಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ALLEGATION AGAINST GOVERNMENT  DCM DK SHIVAKUMAR  BJP PARTY URGED  BENGALURU
ಡಿಸಿಎಂ ಡಿಕೆಶಿ (IANS)

By ETV Bharat Karnataka Team

Published : Oct 30, 2024, 7:23 AM IST

ಬೆಂಗಳೂರು: ನಾನೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ. ಅವರು ನಮ್ಮ ಸರ್ಕಾರದ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಜಯನಗರಕ್ಕೆ ಅನುದಾನ ನೀಡಿಲ್ಲ ಎಂಬ ಬಿಜೆಪಿ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅವರು "ನಮ್ಮ ತೆರಿಗೆ, ನಮ್ಮ ಹಕ್ಕು" ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, “ತಡ ಮಾಡುವುದು ಬೇಡ, ಕೂಡಲೇ ಮಾಡಲಿ. ಅವರು ನನ್ನ ಭೇಟಿಗೆ ಬಂದಿದ್ದರು. ಅವರು ಪ್ರತಿಭಟನೆ ಮಾಡಬೇಕು ಎಂದು ತಿಳಿಸಿದರು.

ಗಂಗಾ ಮತಸ್ಥರು ಬೀದಿಗೆ ಬರಲು ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕುಮಾರಣ್ಣ ಚುನಾವಣೆ ಮಾಡುತ್ತಿದ್ದಾರೆ, ಮಾಡಲಿ. ನಮಗೆ ಕುಮಾರಣ್ಣ, ಗೌಡರ ಬಗ್ಗೆ ಮಾತನಾಡಲು ಸಮಯವಿಲ್ಲ. ನಾವುಂಟು, ಆ ಕ್ಷೇತ್ರ ಹಾಗೂ ಅದರ ಜನತೆಯ ಉದ್ಧಾರವುಂಟು. ನಾವು ಆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಒಳ ಮೀಸಲಾತಿಗೆ ಬದ್ಧ: ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದ್ದು, ಈ ಸಂಬಂಧ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ಮಾದಿಗ ಸಮುದಾಯಕ್ಕೆ ಒಳಮೀಸಲು ಆದಷ್ಟು ಶೀಘ್ರ ಜಾರಿಗೆ ತರಬೇಕು ಎಂದು ಮಾಜಿ ಸಚಿವರಾದ ಎಚ್ ಆಂಜನೇಯ, ಶಿವಣ್ಣ, ರಾಜ್ಯಸಭೆ ಸದಸ್ಯ ಎಲ್ ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ ಅವರ ನೇತೃತ್ವದ ನಿಯೋಗವು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ, ಸಮಿತಿಗೆ ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ನೀಡಬಾರದು. ಮೂರು ತಿಂಗಳ ನಂತರ ಶೀಘ್ರ ಒಳಮೀಸಲಾತಿ ಜಾರಿಯಾಗಬೇಕು ಎಂದು ನಿಯೋಗ ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ವಿಚಾರವಾಗಿ ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಚಿತ್ರದುರ್ಗದ ಸಮಾವೇಶದಲ್ಲೂ ನಾವು ಈ ವಿಚಾರವಾಗಿ ಜನರಿಗೆ ಮಾತು ಕೊಟ್ಟಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಜನಸಂಖ್ಯೆ ಆಧಾರದ ಹಾಗೂ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧವಾಗಿದೆ. ಸಂವಿಧಾನ ಆರಂಭದಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯ ಕಾಪಾಡುತ್ತಾ ಬಂದಿದೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪಕ್ಷಾತೀತವಾಗಿ ನಾಯಕರುಗಳು ಬಂದು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕುನ್ಹಾ ವರದಿ ನೋಡಿ ನನಗೇ ಕೊರೊನಾ ಬಂದಂತಾಗಿದೆ:ಕೋವಿಡ್ ಅವಧಿಯ ಹಗರಣಗಳ ಸಂಬಂಧ ಕುನ್ಹಾ ಅವರ ವರದಿ ಮೇಲೆ ಉಪಸಮಿತಿ ಸಭೆ ಬಗ್ಗೆ ಕೇಳಿದಾಗ, “ಕುನ್ಹಾ ಅವರ ವರದಿ ನೋಡಿ, ನನಗೇ ಕೊರೊನಾ ಬರುವಂತೆ ಕಾಣುತ್ತಿದೆ. ಅಷ್ಟು ಗಾಬರಿಯಾಗಿದೆ. ನಾವು ಅವರಿಂದ ಹೆಚ್ಚಿನ ಮಾಹಿತಿ ಕೇಳಿದ್ದೇವೆ. ವರದಿಯಿಂದಲೇ ಕೋರೋನಾ ಹರಡುವಂತಿದೆ. ಈ ಬಗ್ಗೆ ಆರೋಗ್ಯ ಸಚಿವರು ಮಾತನಾಡುತ್ತಾರೆ” ಎಂದು ತಿಳಿಸಿದರು.

ನಮ್ಮ ಕ್ಷೇತ್ರಕ್ಕೂ ಅನುದಾನ ಕೊಡಿ: ನಗರದ ಎಲ್ಲ ಶಾಸಕರನ್ನು ಸಮಾನವಾಗಿ ಪರಿಗಣಿಸಿ ತಮ್ಮ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಬೇಕೆಂದು ಜಯನಗರ ಕ್ಷೇತ್ರದ ಶಾಸಕ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ನೋಡಿದ್ದೇನೆ. ಬೆಂಗಳೂರಿನ ಜಯನಗರ ಹೊರತುಪಡಿಸಿ 27 ವಿಧಾನಸಭಾ ಕ್ಷೇತ್ರಕ್ಕೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. 28ನೇ ಕ್ಷೇತ್ರ ಜಯನಗರ ಕ್ಷೇತ್ರಕ್ಕೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದರು.

ಜಯನಗರ ಕ್ಷೇತ್ರವು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಕಳೆದೆರಡು ವರ್ಷಗಳಲ್ಲಿ ಸುಮಾರು 565 ಕೋಟಿ ರೂ. ತೆರಿಗೆ ಕಟ್ಟಿದ್ದೇವೆ ಎಂದು ದಾಖಲೆ ಪ್ರದರ್ಶಿಸಿದರು. ಇಷ್ಟು ತೆರಿಗೆ ಪಾವತಿಸಿದರೂ 10 ಕೋಟಿಯಷ್ಟೂ ಅನುದಾನ ನೀಡದೇ ಇರುವುದು ಸರಿಯಲ್ಲ ಎಂದು ನುಡಿದರು.

ಜಯನಗರವು 70 ವರ್ಷಗಳ ಇತಿಹಾಸ ಹೊಂದಿದೆ. ಎಲ್ಲವೂ 100 ಅಡಿ ರಸ್ತೆಗಳು. ಎಲ್ಲ ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿವೆ. ಅಪಘಾತಗಳು ಆಗುತ್ತಿವೆ. ಒಮ್ಮೆ ಬನ್ನಿ ಎಂದರೂ ಬರುತ್ತಿಲ್ಲ ಎಂದು ತಿಳಿಸಿದರು.

ನಿಮ್ಮ ಮನೆಗೆ, ಕಚೇರಿಗೆ ಬಂದು ಏಳೆಂಟು ಮನವಿಪತ್ರ ಕೊಟ್ಟಿದ್ದೇವೆ. ಆದರೆ ಕವಡೆ ಕಾಸನ್ನೂ ಕೊಟ್ಟಿಲ್ಲ. ನಾವು ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಕೂಡ ತಾರತಮ್ಯ ಮಾಡದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಬ್ರ್ಯಾಂಡ್ ಬೆಂಗಳೂರು, ಪಾಲಿಕೆ 5 ಭಾಗವಾಗಿ ವಿಂಗಡನೆ ಕುರಿತು ಸದನದಲ್ಲಿ ಮಾಹಿತಿ ಕೇಳಿದ್ದೆ. ಅನುದಾನ ಕೊಡುವುದಾಗಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಅಶೋಕ್ ಅವರು ಕೂಡ ಧ್ವನಿಗೂಡಿಸಿ ಅನುದಾನ ನೀಡಲು ಕೋರಿದ್ದರು. ಈಗ ಎಲ್ಲರಿಗೂ ಹಣ ಕೊಟ್ಟರೂ ನನಗೊಬ್ಬನಿಗೇ ಅನುದಾನ ನೀಡಿಲ್ಲ ಎಂದರು.

ಈ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಮಿತ್ರರ ಜೊತೆ ಮಾತನಾಡಿ ಮುಂದಿನ ನಡೆಯ ಕುರಿತು ಚಿಂತಿಸಲಿದ್ದೇವೆ. ದಯಮಾಡಿ ಉಪ ಮುಖ್ಯಮಂತ್ರಿಗಳು ಎಲ್ಲ ಶಾಸಕರೂ ಒಂದೇ ಎಂದೇ ಪರಿಗಣಿಸಿ ಅನುದಾನ ನೀಡಬೇಕೆಂದು ವಿನಂತಿಸಿದರು. ಜಯನಗರಕ್ಕೆ ಹೆಚ್ಚಿನ ಅನುದಾನ ಕೊಡಲು ಕೋರಿದರು.

ಓದಿ:ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ: ಸಿಎಂ ಅಭಯ

ABOUT THE AUTHOR

...view details