ಕರ್ನಾಟಕ

karnataka

ETV Bharat / state

ನಾನು ಯಾರದೋ ಒಬ್ಬರ ಆಶೀರ್ವಾದದಿಂದ ಬೆಳೆದಿಲ್ಲ, ನಮ್ಮದೂ ರಾಜಕೀಯ ಕುಟುಂಬ: ಜನಾರ್ದನ ರೆಡ್ಡಿ ಹೇಳಿಕೆ ಸರಿಯಲ್ಲ: ಶ್ರೀರಾಮುಲು - FORMER MINISTER B SRIRAMULU

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸದ್ಯಕ್ಕೆ ನನಗೆ ಪಕ್ಷ ಬಿಡುವ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.

former-minister-b-sriramulu
ಮಾಜಿ ಸಚಿವ ಬಿ ಶ್ರೀರಾಮುಲು (ETV Bharat)

By ETV Bharat Karnataka Team

Published : Jan 23, 2025, 4:05 PM IST

ಬಳ್ಳಾರಿ : ಸದ್ಯಕ್ಕೆ ನನಗೆ ಪಕ್ಷ ಬಿಡುವ ಆಲೋಚನೆಯಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ಬಂದರೆ ಕೇಂದ್ರ ವರಿಷ್ಠರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ಸೇರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬುಧವಾರ ನನ್ನನ್ನು ಪಕ್ಷ ಸರಿಯಾಗಿ ನಡೆಸಿಕೊಳ್ಳದಿದ್ದರೆ ನಾನು ಅವಮಾನವನ್ನು ಸಹಿಸಿಕೊಂಡು ಇರುವುದಿಲ್ಲ. ಬೇಕಿದ್ದರೆ ಬಿಜೆಪಿ ತೊರೆಯಲು ಸಿದ್ಧ ಎಂದು ಶ್ರೀರಾಮುಲು ಘೋಷಣೆ ಮಾಡಿದ್ದರು. ಇಂದು ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಸದ್ಯಕ್ಕೆ ನನಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳವರೆಗೆ ನನಗೆ ಎಲ್ಲವನ್ನು ಕೊಟ್ಟು ಬೆಳೆಸಿದೆ. ಅಷ್ಟು ಬೇಗನೆ ನಾನು ತಾಯಿ - ಮಗ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿದರು (ETV Bharat)

ನಮ್ಮದು ಕೂಡ ರಾಜಕೀಯ ಹಿನ್ನಲೆಯುಳ್ಳ ಕುಟುಂಬ : ನಾವೇನು ಹಾದಿ ಬೀದಿಯಿಂದ ಬಂದವರಲ್ಲ. 40 ವರ್ಷ ರಾಜಕೀಯ ಮಾಡಿಕೊಂಡು ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಸೋಲು - ಗೆಲುವು ಹೊಸದೇನಲ್ಲ ಎಂದು ತಮ್ಮ ಆತ್ಮೀಯ ಸ್ನೇಹಿತ ಜನಾರ್ದನ ರೆಡ್ಡಿ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

ಬಿ. ಶ್ರೀರಾಮುಲು ಅವರನ್ನು ಬೆಳೆಸಿದ್ದೇ ನಾನು ಎಂಬ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆನ್ನಿಗೆ ಕಾರ್ಯಕರ್ತರ ಪಡೆ ಇದೆ. ಗಾಲಿ ಜನಾರ್ದನ ರೆಡ್ಡಿ ಸುಳ್ಳಿನ ಮೇಲೆ ಕೋಟೆ ಕಟ್ಟಲು ಹೊರಟಿದ್ದಾರೆ. ಇದನ್ನು ನಂಬುವಷ್ಟು ಜನರು ಮೂರ್ಖರಲ್ಲ. ಬಳ್ಳಾರಿಗೆ ಎಲ್ಲವೂ ಗೊತ್ತಿದೆ ಎಂದರು.

ಯಾರದೋ ಒಬ್ಬರ ಆಶೀರ್ವಾದದಿಂದ ಬೆಳೆದಿಲ್ಲ:ಯಾರದೋ ಒಬ್ಬರ ಆಶೀರ್ವಾದದಿಂದ ಬಳ್ಳಾರಿ ಅಥವಾ ರಾಜ್ಯದಲ್ಲಿ ಬೆಳೆದು ಬಂದಿಲ್ಲ. ಬಳ್ಳಾರಿಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದ ಕುಟುಂಬದವರ ವಿರುದ್ಧ ಹಾದಿ ಬೀದಿಯಲ್ಲಿ ಹೋರಾಟ ನಡೆಸಿ ಬೆಳೆದಿದ್ದೇನೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇನೆ. ಹೀಗಾಗಿಯೇ ಪಕ್ಷ ನನ್ನನ್ನು ಗುರುತಿಸಿತ್ತು ಎಂದು ಶ್ರೀರಾಮುಲು ತಿಳಿಸಿದರು.

ಒಬ್ಬ ಸಾಮಾನ್ಯನಾಗಿದ್ದ ನನ್ನನ್ನು ಬಿಜೆಪಿಯು ಗುರುತಿಸಿ ಬೆಳೆಸಿದೆ. ಏನೂ ಇಲ್ಲದಿದ್ದರೆ ನನಗೇಕೆ ಏಕಕಾಲದಲ್ಲಿ ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಟಿಕೆಟ್ ನೀಡುತ್ತಿತ್ತು. ರಾಮುಲು ಶಕ್ತಿ ಏನೆಂಬುವುದು ಬಿಜೆಪಿಗೆ ಗೊತ್ತಿದೆ. ನನಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಸಂಪರ್ಕವಿದೆ. ನಾನು ಗೆಲ್ಲಲು ಜನಾರ್ದನ ರೆಡ್ಡಿ ಮ್ಯಾಜಿಕ್ ಮಾಡಿದ್ದರೇ? ಎಂದು ಪ್ರಶ್ನಿಸಿದರು. ನಾನು ಈವರೆಗೂ ಜನಾರ್ದನ ರೆಡ್ಡಿಯಿಂದ ಬೆಳೆದು ಬಂದಿಲ್ಲ. ಒಂದು ತಳ ಸಮುದಾಯದಿಂದ ಬಂದ ನಾನು ಸ್ವಂತ ಪರಿಶ್ರಮದಿಂದ ಬೆಳೆದಿದ್ದೇನೆ. ರೆಡ್ಡಿ ಆಧಾರ ರಹಿತ ಆರೋಪ ಮಾಡಿದರೆ ಅದನ್ನು ಕೇಳಲು ನಾನೇನು ಚಿಕ್ಕ ಮಗುವಲ್ಲ ಎಂದು ರೆಡ್ಡಿ ವಿರುದ್ಧ ಶ್ರೀರಾಮುಲು ಗುಡುಗಿದರು.

ರಾಧಾಮೋಹನ್​ ದಾಸ್​​​​​​ ರ ಹೇಳಿಕೆಗೆ ಉತ್ತರಕೊಟ್ಟಿದ್ದೇನೆ:ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ನಾನು ಸಮಜಾಯಿಷಿ ಉತ್ತರ ಕೊಟ್ಟಿದ್ದೇನೆ ಎಂದರು.

ಸಭೆಯಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಒಂದೇ ಒಂದೂ ಮಾತನಾಡದೇ ಇದ್ದುದ್ದು ನನಗೆ ತುಂಬಾ ಬೇಸರ ಉಂಟು ಮಾಡಿತ್ತು. ಶ್ರೀರಾಮುಲು ಎಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಲ್ಲ ಎಂದು ನನ್ನ ಪರವಾಗಿ ಹೇಳಲು ಏನಾಗಿತ್ತು? ಎಂದು ಶ್ರೀರಾಮುಲು ಪ್ರಶ್ನಿಸಿದರು.

ನನ್ನ ಪರವಾಗಿ ಸಭೆಯಲ್ಲಿದ್ದ ಡಿ. ವಿ ಸದಾನಂದಗೌಡ ಬಿಟ್ಟರೆ ಯಾರೂ ಮಾತನಾಡಲಿಲ್ಲ. ಶ್ರೀರಾಮುಲು ಟಿಕೆಟ್ ಸಿಗಲಿ ಬಿಡಲಿ ಪಕ್ಷ ವಿರೋಧಿ ಚಟುವಟಿಕೆ ಅಥವಾ ಅಭ್ಯರ್ಥಿ ಸೋಲಿಗೆ ಷಡ್ಯಂತ್ರ ನಡೆಸುವ ಜಾಯಮಾನದವನಲ್ಲ. ಅದನ್ನು ನಾನು ಬೆಳೆಸಿಕೊಂಡು ಬಂದಿಲ್ಲ. ಈಗಲಾದರೂ ಜನಾರ್ದನ ರೆಡ್ಡಿ ಸುಳ್ಳು ಹೇಳುವುದನ್ನು ಬಿಡಲಿ ಎಂದು ಮನವಿ ಮಾಡಿದರು.

ನನ್ನಿಂದ ಬೆಳೆದಿದ್ದು ಎಂಬುದು ಸರಿಯಲ್ಲ ಅದನ್ನು ಬಿಡಲಿ:ನನ್ನಿಂದಲೇ ಶ್ರೀರಾಮುಲು ಬೆಳೆದಿದ್ದು ಎಂದು ಜನಾರ್ದನ ರೆಡ್ಡಿ ಹೇಳುವುದು ಸರಿಯಲ್ಲ. ಪ್ರತಿಯೊಬ್ಬ ರಾಜಕಾರಣಿಗೂ ಅವರದೇ ಆದ ಕಾರ್ಯಕರ್ತರು, ಅಭಿಮಾನಿಗಳು ಇರುತ್ತಾರೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ನಾನಾ ಕಡೆ ಪಕ್ಷವನ್ನು ಸಂಘಟಿಸಲು ಶ್ರಮ ಹಾಕಿದ್ದೇನೆ. ಏನೇನೂ ಇಲ್ಲದ ಬಳ್ಳಾರಿಯಲ್ಲೂ ಬಿಜೆಪಿ ಒಂದು ಕಾಲಕ್ಕೆ 9 ಕ್ಷೇತ್ರಗಳಲ್ಲಿ 8 ಕಡೆ ಗೆಲ್ಲಲು ನಮ್ಮ ಪರಿಶ್ರಮವಿದೆ. ಇದನ್ನೆಲ್ಲ ಮರೆತು ರೆಡ್ಡಿ ನನ್ನ ಬಗ್ಗೆ ಮಾತನಾಡಿದರೆ ನಾನು ಕೂಡ ಮಾತನಾಡಬೇಕಾಗುತ್ತದೆ ಎಂದು ರೆಡ್ಡಿಗೆ ಎಚ್ಚರಿಕೆ ನೀಡಿದರು.

ನೀವು ಕಾಂಗ್ರೆಸ್​​​​ಗೆ ಹೋಗುತ್ತಿದ್ದೀರಿ, ಡಿ.ಕೆ.ಶಿವಕುಮಾರ್​ ಅವರು ನಿಮ್ಮನ್ನು ಬಳಸಿಕೊಂಡು ಸತೀಶ್​ ಜಾರಕಿಹೊಳಿಯವರನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿ ಹೇಳಿಗೆ ಪ್ರತಿಕ್ರಿಯಿಸಿ, ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ಇರುವವನು. ಇದೆಲ್ಲವೂ ಜನಾರ್ದನ ರೆಡ್ಡಿಯವರ ಊಹೆ ಇರಬಹುದು. ಸತೀಸ್ ಜಾರಕಿಹೊಳಿ ಅವರನ್ನು ಮಟ್ಟಹಾಕಲು ನಾನ್ಯಾರು? ಅವರ ಪಕ್ಷದಲ್ಲಿ ಅವರು ದೊಡ್ಡವರು, ನಮ್ಮ ಪಕ್ಷದಲ್ಲಿ ನಾನು ದೊಡ್ಡವನು. ವಾಲ್ಮೀಕಿ ಸಮುದಾಯವರು ಕಾಂಗ್ರೆಸ್​ನಲ್ಲೂ ಇದ್ದಾರೆ ಎಂದರು.

ಇದನ್ನೂ ಓದಿ :ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ : ಜನಾರ್ದನ ರೆಡ್ಡಿ - MLA JANARDHANA REDDY

ABOUT THE AUTHOR

...view details