ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ವಾಮಮಾರ್ಗ ಅನುಸರಿಸುತ್ತಿದೆ: ಸಿಎಂ ಸಿದ್ದರಾಮಯ್ಯ - CM Siddaramaiah

ವಾಲ್ಮೀಕಿ ಹಗರಣ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಲ್ಲೇಶ್​ಗೆ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಇಡಿ ಬೆದರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ಪ್ರತಿಭಟನೆ ವೇಳೆ ಹೇಳಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Jul 23, 2024, 1:21 PM IST

ಬೆಂಗಳೂರು:"ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ಸರ್ಕಾರ ವಾಮಮಾರ್ಗವನ್ನು ಅನುಸರಿಸುತ್ತಿದೆ" ಎಂದು ವಾಲ್ಮೀಕಿ ಹಗರಣದಲ್ಲಿ ಇಡಿ ತನಿಖೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಇಂದು ಪ್ರತಿಭಟನೆ ವೇಳೆ ಮಾತನಾಡಿದ ಅವರು, "ಇಡಿ ಅಧಿಕಾರಿಗಳು ಜೀವಭಯ ಉಂಟುಮಾಡಿ ಕಲ್ಲೇಶ್​ಗೆ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಬೆದರಿಸಿದ್ದಾರೆ. ಅವರು ದೂರು ಕೊಟ್ಟು ಕೇಸ್ ಕೂಡ ರಿಜಿಸ್ಟರ್ ಮಾಡಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಬೇಕು, ಸಿಎಂ ಅವರನ್ನು ಟಾರ್ಗೆಟ್​​ ಮಾಡಬೇಕು, ಸಿಎಂ ಇಮೇಜ್​ ಕಡಿಮೆ ಮಾಡಬೇಕು. ಪರಿಶಿಷ್ಟ ವರ್ಗದವರ ಪರವಾಗಿ ನಾವಿದ್ದೇವೆ ಅಂತಾ ಹೇಳಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

ಶೇ.90ರಷ್ಟು ಎಸ್ಐಟಿಯಿಂದ ತನಿಖೆ ಮುಗಿದಿದೆ. ಬ್ಯಾಂಕ್​ನವರೇ ಕಾರಣ ಅಂತ ಅವರು ತಿಳಿಸಿದ್ದಾರೆ. ಹಾಗಾಗಿ, ಸಿಬಿಐ ತನಿಖೆ ಮಾಡುತ್ತಿದೆ. ಇಡಿಯವರು ನಾಗೇಂದ್ರ ದದ್ದಲ್​ ಮನೆ ಮೇಲೆ ದಾಳಿ​ ಮಾಡಿ, ಅವರನ್ನು ವಶಕ್ಕೆ ತೆಗೆದುಕೊಂಡು ಈಗ ಬಂಧನಕ್ಕೆ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯವರಿಂದ ಆದೇಶವಿದೆ ಅಂತಾ ಬರೆದುಕೊಡಿ ಎಂದು ಇಡಿಯವರು ಒತ್ತಡ ಹಾಕುತ್ತಿದ್ದಾರೆ" ಎಂದರು.

"ವಾಲ್ಮೀಕಿ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆ ಬಹಳ ವೇಗವಾಗಿ ನಡೆಯುತ್ತಿದೆ. ಹಿಂದೆ ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳ ತನಿಖೆಗೆ ಇಡಿ ಬಂದೇ ಇಲ್ಲ. ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ಯಾವುದೇ ಪ್ರಕರಣವನ್ನೂ ಕೊಟ್ಟಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಪ್ರಕರಣವನ್ನು ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಅನ್ನುತ್ತಿದ್ದಾರೆ. ನಾವು ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಟ್ಟಿದ್ದೇವೆ. ಯಾವುದು ಅಗತ್ಯ ಇದೆಯೋ ಅದನ್ನೆಲ್ಲಾ ಕೊಟ್ಟಿದ್ದೇವೆ" ಎಂದರು.

ಮುಂದುವರೆದು ಮಾತನಾಡಿದ ಸಿಎಂ, "25 ಕೋಟಿಗಿಂತ ಅಧಿಕ ಹಣ ಹಗರಣವಾದರೆ ಸಿಬಿಐ ತನಿಖೆಗೆ ಬರಬೇಕು. ಬರಲಿ, ತನಿಖೆ ಮಾಡಲಿ, ನಮ್ಮದೇನೂ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ಮಾಡಬಾರದು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಬಾರದು. ಇದನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸುತ್ತೇವೆ. ರಾಜಕೀಯ ದ್ವೇಷ, ರಾಜಕೀಯ ಸೇಡಿನ ಬಗ್ಗೆ ತೀವ್ರವಾಗಿ ಖಂಡಿಸುತ್ತೇವೆ. ಹೈಕಮಾಂಡ್ ನಾಯಕರ ಜೊತೆಗೂ ಮಾತಾಡಿದ್ದೇವೆ. ಲೋಕಸಭೆಯಲ್ಲಿ ಇದನ್ನು ಪ್ರಸ್ತಾಪಿಸಲು ಹೇಳಿದ್ದೇವೆ. ಯಾರ ಮುಲಾಜಿಗೂ ಒಳಗಾಗಲ್ಲ, ಯಾರನ್ನು ರಕ್ಷಣೆ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎಂದು ವಾಗ್ಧಾಳಿ ಮಾಡಿದರು.

ಇದನ್ನೂ ಓದಿ:ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣ ತನಿಖಾ ಹಂತದಲ್ಲಿದೆ: ಕಮಿಷನರ್​ ಬಿ.ದಯಾನಂದ್ - Valmiki Corporation Scam

ABOUT THE AUTHOR

...view details