ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ರಾಜ್ಯದ ತೆರಿಗೆ ಪಾಲಿನ ಹಣ ನೀಡದಿರುವ ಆರೋಪ ಸಂಬಂಧ "ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯಾದೆ ಇಲ್ಲ" ಎಂಬ ಹೇಳಿಕೆಯು ಸದನದಲ್ಲಿಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಕಾರಣವಾಯಿತು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆ ನಡೆಸಿದ ಆಡಳಿತ ಪಕ್ಷದ ಸದಸ್ಯ ಯು.ಬಿ.ವೆಂಕಟೇಶ್, ನಡೆದಂತೆ ನುಡಿದಂತೆ ಸರ್ಕಾರ ನಮ್ಮದು. ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ತಂದಿದೆ. ಆದರೆ, ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ನೀಡಲು ಮೀನಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಮಾನ ಮಾರ್ಯಾದೆ ಇಲ್ಲ ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಖಂಡಿಸಿದರು.
ಈ ವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯಪಾಲರ ಭಾಷಣ ವೇಳೆ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಹೇಳಬೇಕೇ ವಿನಾಃ ಕೇಂದ್ರದ ವಿರುದ್ಧ ಅವಹೇಳನಕಾರಿ ಮಾತನಾಡುವುದು ಸರಿಯಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೇಂದ್ರ ನೀಡಿದೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ನಿಜ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ತೆರಿಗೆ ಹಣ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುವ ಮೂಲಕ ಜನತೆಗೆ ಮೋಸ ಮಾಡಿದ್ದೀರಿ ಎಂದು ಆಪಾದಿಸಿದರು.
ಇದಕ್ಕೆ ಕೋಟಾ ಪ್ರತಿಕ್ರಿಯಿಸಿ, ಮಂತ್ರಿಯಾಗುವ ಕನಸು ಈಡೇರಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ವಿಷಾದವಿದೆ ಎಂದಿದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ಮಂತ್ರಿ ಆಗುವುದಕ್ಕೆ ನಾನು ಬಂದಿಲ್ಲ. ನಾನು ಮಂತ್ರಿಯಾಗುವ ಅಜೆಂಡಾ ಸಹ ಇಟ್ಟುಕೊಂಡಿಲ್ಲ. ನಾನು ಹಲವರನ್ನು ಮಂತ್ರಿ ಮಾಡಿದ್ದೇನೆ. ಪಕ್ಷ ಸಂಘಟನೆ ಮಾಡ್ತೇನೆ. ಮಂತ್ರಿಯಾಗಿಲ್ಲ ಎಂಬುದರ ಬಗ್ಗೆ ನಿರಾಸೆ ಇಲ್ಲ ಎಂದು ಹೇಳುತ್ತಿದ್ದಂತೆ ವ್ಯಂಗ್ಯವಾಡಿದ ಕೋಟಾ, ಮಂತ್ರಿ ಆಗುವ ನಿಮ್ಮ ಸಾಮರ್ಥ್ಯವನ್ನು ರಾಜ್ಯದ ಜನ ಹಾಗೂ ವಿರೋಧ ಪಕ್ಷ ಅರಿತಿದೆ. ಆದರೆ, ಆಡಳಿತ ಪಕ್ಷಕ್ಕೆ ಅದರ ಅರಿವಿಲ್ಲ ಎಂದು ಕಿಚಾಯಿಸಿದರು.
ಮತ್ತೆ ಮಾತು ಮುಂದುವರೆಸಿದ ವೆಂಕಟೇಶ್, ಸರ್ಕಾರದ ಸಾಧನೆಗಳ ಭಾಷಣ ಮುಂದುವರೆಯುತ್ತಿದ್ದಂತೆ ಅಯೋಧ್ಯೆ ರಾಮಮಂದಿರವನ್ನು ಕೇಂದ್ರವು ಗುತ್ತಿಗೆ ಪಡೆದುಕೊಂಡಿದೆಯಾ ಎಂದು ಪ್ರಶ್ನಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತೆ ವಿರೋಧ ವ್ಯಕ್ತಪಡಿಸಿದರು.
ವಿಪಕ್ಷ ಸಚೇತಕ ರವಿಕುಮಾರ್, ನಾವು ಎಲ್ಲಿಯೂ ರಾಮಮಂದಿರ ಗುತ್ತಿಗೆ ಪಡೆದುಕೊಂಡಿದ್ದೇವೆ ಎಂದು ಹೇಳಿಲ್ಲ. ಶ್ರೀರಾಮ ಜನ್ಮಭೂಮಿ ಎಂದಷ್ಟೇ ಹೇಳಿದ್ದೇವೆ ಎಂದಿದ್ದಕ್ಕೆ ಮಧ್ಯಪ್ರವೇಶಿಸಿದ ಬಿ.ಕೆ.ಹರಿಪ್ರಸಾದ್, ಸುಪ್ರೀಂ ಕೋರ್ಟ್ ಆದೇಶದಲ್ಲಿ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಲ್ಲ ಎಂದು ಹೇಳಿದೆ. ಆದರೆ, ರಾಮನನ್ನು ಗುತ್ತಿಗೆ ಪಡೆದುಕೊಂಡಿರುವಂತೆ ಬಿಜೆಪಿ ವರ್ತಿಸುತ್ತಿದೆ. ಈ ಬಗ್ಗೆ ಹೋರಾಟ ನಡೆಸಿದ್ದ ಎಲ್.ಕೆ.ಅಡ್ವಾಣಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸುಪ್ರೀಂ ಕೋರ್ಟ್ ತೀರ್ಪು ಮತ್ತೊಮ್ಮೆ ಓದಿ. ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳ ಎಂದು ಐವರು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದರು. ಇದೇ ವಿಷಯವಾಗಿ ಉಭಯ ಪಕ್ಷದ ಸದಸ್ಯರು ವಾಕ್ಸಮರ ನಿಲ್ಲಿಸುವಂತೆ ಸೂಚಿಸಿದರೂ ಗದ್ದಲ ನಿಲ್ಲಿಸದಿದ್ದರಿಂದ ಸದನವನ್ನು ಸಭಾಪತಿ ಬಸವರಾಜ ಹೊರಟ್ಟಿ ನಾಳೆಗೆ ಮುಂದೂಡಿದರು.
ಇದನ್ನೂ ಓದಿ:ಸದನದಲ್ಲಿ ಸದ್ದು ಮಾಡಿದ ರಾಮಮಂದಿರ; ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ