ಕರ್ನಾಟಕ

karnataka

ETV Bharat / state

ಹೈಕಮಾಂಡ್ ಸೂಚನೆಯಂತೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಪ್ಪಿಗೆ ಸೂಚಿಸಿದ್ದೇನೆ: ಜಗದೀಶ್ ಶೆಟ್ಟರ್ - Belgaum Lok Sabha constituency

ಬೆಳಗಾವಿ ನಾಯಕರು ಸಹ ಬನ್ನಿ‌ ಎಂದು ಸ್ವಾಗತಿಸಿದ್ದಾರೆ. ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದು, ಉತ್ತಮ ಒಡನಾಟ ಇದೆ. ಬೆಳಗಾವಿಯಿಂದ ನಾನು ಸ್ಪರ್ಧೆ ಮಾಡುತ್ತಿರುವುದರಿಂದ ಕಾರ್ಯಕರ್ತರು, ಜನರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Former CM Jagdish Shettar spoke to the media.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Mar 15, 2024, 10:00 PM IST

Updated : Mar 15, 2024, 10:40 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ:ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರ ಭೇಟಿಗೆ ಬೆಂಗಳೂರಿಗೆ ಹೋಗಿದ್ದೆನು. ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು. ಬೆಳಗಾವಿ ನಾಯಕರ ಜೊತೆ ಸಹ ಮಾತುಕತೆ ನಡೆಸಿರುವೆ. ಬೆಳಗಾವಿ ಕ್ಷೇತ್ರಕ್ಕೆ ಒಪ್ಪಿಗೆ ಸೂಚಿಸಿ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಾಯಕರು ಸಹ ಬನ್ನಿ‌ ಎಂದು ಸ್ವಾಗತಿಸಿದ್ದಾರೆ. ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ ಬೆಳಗಾವಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಬೆಳಗಾವಿ ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿದ್ದೇನೆ. ಹಿಂದೆ ಬೆಳಗಾವಿ ಜಿಲ್ಲೆಯ ವಿವಿಧ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದಿಂದ ಕೆಲಸ ಮಾಡಿದ್ದೇನೆ. ಅಲ್ಲಿ ಪಕ್ಷ ಬೆಳೆಸಲು ಶ್ರಮಿಸಿರುವೆ. ಹೀಗಾಗಿ ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಸಹಕಾರಿ ಆಯಿತು. ನಾನು ಸ್ಪರ್ಧೆ ಮಾಡುತ್ತಿರುವುದರಿಂದ ಅಲ್ಲಿನ ಕಾರ್ಯಕರ್ತರು, ಜನರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅಂಗಡಿ ಕುಟುಂಬದ ಜೊತೆ ಮಾತುಕತೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಕಳೆದ ಬಾರಿ ಗೆಲುವಿನ ಅಂತರ ಕಡಿಮೆಯಾಗಿರುವ ವಿಚಾರಕ್ಕೆ ‌ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆಯಲ್ಲಿ ಎಂಇಎಸ್ ಸ್ಪರ್ಧೆ ಕಾರಣಕ್ಕೆ ಗೆಲುವಿನ ಅಂತರ ಕಡಿಮೆ ಆಗಿತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಬೆಳಗಾವಿ ಮರಾಠ ಸಮುದಾಯದ ನಾಯಕರು ಮೋದಿ ನಾಯಕತ್ವ, ಹಿಂದುತ್ವದ ಪರವಾಗಿ ನಿಲ್ಲುತ್ತದೆ ಎಂಬ ಭರವಸೆ ಇದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ಬೆಳಗಾವಿ ಜನರ ಕನಸು ಆಗಿದೆ ಎಂದರು.

ದೇಶಾದ್ಯಂತ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಬೆಳವಣಿಗೆ, ಮೋದಿ ಅವರ ನಾಯಕತ್ವ, ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎನ್ನುವ ಕೂಗು, ಸಮೀಕ್ಷೆ ಪ್ರಕಾರ ಬಿಜೆಪಿ ಏಕಾಂಗಿಯಾಗಿ 370 ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆ ಕಾರಣಕ್ಕೆ ಟಿಕೆಟ್ ಮಿಸ್ ಆದಾಗ ಅಸಮಾಧಾನ ಇದ್ದೆ‌ ಇರುತ್ತೆ. ಕಾಂಗ್ರೆಸ್​ನ ಪರಿಸ್ಥಿತಿ ನೋಡಿ, ಕೆಲ ಕ್ಷೇತ್ರಗಳಲ್ಲಿ ನಿಲ್ಲು ಅಂದ್ರೂ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲು ಯಾರು ತಯಾರಿಲ್ಲ. ಆ ಪಕ್ಷ ವಿಶ್ವಾಸ ಕಳೆದುಕೊಂಡಿದೆ. ಈಶ್ವರಪ್ಪ ಅವರ ಜೊತೆ ವರಿಷ್ಠರು ಮಾತನಾಡುತ್ತಿದ್ದಾರೆ. ಅಸಮಾಧಾನ ಶಮನ ಮಾಡುವ ಕೆಲಸ ಪಕ್ಷದ‌ ನಾಯಕರು ಮಾಡಿಯೇ ಮಾಡ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಕೆ ಎಸ್ ಈಶ್ವರಪ್ಪ ಘೋಷಣೆ

Last Updated : Mar 15, 2024, 10:40 PM IST

ABOUT THE AUTHOR

...view details