ಕೊಪ್ಪಳ: "ತುಂಗಭದ್ರಾ ಜಲಾಶಯಕ್ಕೆ ಒಂದು ಮಂಡಳಿ ಇದೆ. ಅದಕ್ಕೆ ಒಬ್ಬ ಅಧ್ಯಕ್ಷನನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗುತ್ತದೆ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಅವರಿಗೆ ಅಧ್ಯಕ್ಷನನ್ನು ಯಾರು ನೇಮಕ ಮಾಡುತ್ತಾರೆ ಎನ್ನುವ ವಿಷಯವೇ ತಿಳಿದಿಲ್ಲ. ಹಾಗಾಗಿ ನಾನು ತುಂಗಭದ್ರಾ ಜಲಾಶಯದ ವಿಷಯದಲ್ಲಿ ರಾಜಕೀಯ ಮಾಡೋದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳದ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. "ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಕಟ್ಟಾಗಿದೆ. ಅದಕ್ಕೆ ಬಿಜೆಪಿಯವರು ಇದರಲ್ಲಿ ರಾಜ್ಯ ಸರ್ಕಾರದ ಹೊಣೆಗೇಡಿತನ ಇದೆ ಎಂದು ಹೇಳುತ್ತಿದ್ದಾರೆ. ಹಾಗಂದ್ರೆ ಏನರ್ಥ? ಸದ್ಯ ಟಿಬಿ ಬೋರ್ಡ್ನಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳೋಕೆ ಹೋಗುವುದಿಲ್ಲ. ಸದ್ಯ ಜಲಾಶಯದಲ್ಲಿ ನೀರು ತುಂಬಿದ್ದು, ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಬೇಕಿದೆ. ಇನ್ನೂ 50-60 ಟಿಎಂಸಿ ನೀರು ಉಳಿಯುತ್ತದೆ. ಮುಂದೆ ಮಳೆಯಾಗಿ ಮತ್ತೆ ಜಲಾಶಯ ತುಂಬುತ್ತದೆ ಎಂಬ ಆಶಾಭಾವ ಇಟ್ಟುಕೊಳ್ಳೋಣ" ಎಂದರು.