ಬೆಂಗಳೂರು :ಬಿಜೆಪಿಯವರ ಕಪಾಳಕ್ಕೆ ಹೊಡೆಯಿರಿ, ಮೋದಿಗೆ ಹೊಡಿಯಿರಿ, ಸಿ.ಟಿ ರವಿಗೆ ಹೊಡೆಯಿರಿ ಎಂದು ನಾನು ಹೇಳಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಹೇಳಿಕೆ ಬಗ್ಗೆ ನಾನು ಉಲ್ಲೇಖ ಮಾಡಿದ್ದೇನೆ ಎಂದರು.
’’ಈ ದೇಶದಲ್ಲಿ ಎಷ್ಟೊಂದು ಸುಳ್ಳು ಹೇಳಿಕೊಂಡು ಬಂದಿದ್ದೀರಿ. 2014ರ ನರೇಂದ್ರ ಮೋದಿಯವರ ಚುನಾವಣಾ ಬಾಷಣವನ್ನು ಕೇಳಿದ್ರೆ ಬಿಜೆಪಿಯವರೇ ಮತ ಚಲಾಯಿಸುವುದಿಲ್ಲ. 2 ಕೋಟಿ ಉದ್ಯೋಗ ಕೊಡ್ತೇನೆ ಎಂದು ಭಾಷಣ ಮಾಡಿದ್ರಿ. ಕೊಟ್ಟಿದ್ದೀರಾ?. ಮಳೆಯಿಂದ, ಬರದಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಚುನಾವಣೆ ವೇಳೆ ಕೆಲಸ ಮಾಡಿದ್ದೀರಿ ಎಂದು ಹೇಳುವ ಧೈರ್ಯ ಇಲ್ಲ. ಅದಕ್ಕಾಗಿ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ಧರ್ಮದ ಹೆಸರಿನಲ್ಲಿ, ಭಾವನೆ ಹೆಸರಿನಲ್ಲಿ ದಾರಿ ತಪ್ಪಿಸಿದ್ದೀರಿ ಎಂದು ಕಳಕಳಿಯ ಮಾತನಾಡಿದ್ದೇನೆ‘‘ ಎಂದರು.
ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ. ಆಯುಧ ಹಿಡಿದುಕೊಂಡು ಬರುತ್ತೀರಿ. ಸತ್ಯ ಹೇಳಿದ್ರೆ ಎಲ್ಲಿ ಬೇಕಾದ್ರೆ ಉರಿ ಬೀಳುತ್ತದೆ. ಮೆಣಸಿನ ಕಾಯಿ ಇಟ್ಕೊಂಡ ಹಾಗೆ ಆಗುತ್ತಾ?. ಕಾಂಗ್ರೆಸ್ ಪಕ್ಷದ ನಾಯಕನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕಾ?. 2 ಕೋಟಿ ಉದ್ಯೋಗ ನೀಡಿದ್ರೆ ತೋರಿಸಿ. ನಾನೂ ನಿಮಗೆ ಜೈ ಅಂತೀನಿ. ನಾನೂ ಕೇಳಿದ್ರಲ್ಲಿ ತಪ್ಪೇನಿಲ್ಲ. ಪಾಠ ಕಲಿಸುತ್ತೇನೆ. ಸುಳ್ಳು ಮತ್ತು ಸತ್ಯದ ನಡುವಿನ ಯುದ್ದ ಇದು ಎಂದರು.
ಅನುರಾಗ್ ಠಾಕೂರ್ ರೈತರಿಗೆ ಗುಂಡು ಹೊಡೆಯಿರಿ ಎಂದು ಹೇಳಿದ್ರು. ಯಾರಪ್ಪಗೆ ಹುಟ್ಟಿದ್ದು ಎಂದು ಪ್ರಶ್ನಿಸುವ ಇವರು ಸಂಸ್ಕಾರವಂತರಾ?. ಸಿದ್ದರಾಮಯ್ಯ ಬಗ್ಗೆ, ರಾಹುಲ್‌ಗಾಂಧಿ ಬಗ್ಗೆ, ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಏನೇನು ಹೇಳಿಕೆ ಕೊಟ್ಟಿದ್ದೀರಿ?. ಇನ್ಮೊಮ್ಮೆ ನನ್ನ ಭಾಷಣವನ್ನು ಸರಿಯಾಗಿ ಕೇಳಿ. ಉತ್ತರ ಕೊಡಿ ಎಂದು ಶಿವರಾಜ್ ತಂಗಡಗಿ ತಿಳಿಸಿದರು.