ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat) ಮೈಸೂರು:ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಬಂಡೆ ಜೊತೆ 136 ಜನ ಶಾಸಕರಿದ್ದಾರೆ. ನಮಗೆ ಮತ ನೀಡಿದ 1 ಕೋಟಿ 80 ಲಕ್ಷ ಮತದಾರರು ಸಿದ್ದರಾಮಯ್ಯನವರ ಜೊತೆಗಿದ್ದಾರೆ. ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದರು.
ಅಂದು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ವಿ. ಗಣಿಧಣಿಗಳ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಕ್ವಿಟ್ ಇಂಡಿಯಾ ಮೂಮೆಂಟ್ ದಿನ ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ವಿ. ಇಂದು ಜೆಡಿಎಸ್-ಬಿಜೆಪಿ ವಿರುದ್ಧ ಸಂವಿಧಾನ ಉಳಿಸಲು ಹೋರಾಟ. ಬಡವರ ಪರವಾದ ಸರ್ಕಾರ ಉಳಿಸಲು, ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೇವೆ. ಬಿಜೆಪಿ - ಜೆಡಿಎಸ್ ಮಾಡ್ತಿರೋದು ಪಾಪ ವಿಮೋಚನಾ ಯಾತ್ರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರ ನಾಯಕತ್ವ, ನನ್ನ ಅಧ್ಯಕ್ಷತೆಯಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ತೆಗೆಯಲು ಹುನ್ನಾರ ನಡೆಯುತ್ತಿದೆ. ಬಡವರಿಗೆ ಗ್ಯಾರಂಟಿ ಕೊಟ್ಟು, ಬಡವರ ರಕ್ಷಣೆಗಾಗಿ ನಾವು ಹೋರಾಟ ಮಾಡ್ತಿದ್ದೇವೆ. ಮಿಸ್ಟರ್ ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರು. ಕುಮಾರಸ್ವಾಮಿ ನೀನು ಗೆದ್ದಿರೋದು 19 ಸೀಟು ಅಷ್ಟೇ. ನಿನಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ?. ಹೇ ಅಶೋಕಾ, ವಿಜಯೇಂದ್ರ ನಿಮಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ ಎಂದು ಪ್ರಶ್ನಿಸಿದರು.
10 ತಿಂಗಳಲ್ಲ, 10 ವರ್ಷ ನಮ್ಮ ಸರ್ಕಾರ ಮುಟ್ಟಲಾಗದು:2023ರಲ್ಲಿ ರಾಜ್ಯದ ಜನರು ನಮಗೆ ಶೇ. 43ರಷ್ಟು ಮತ ನೀಡಿದ್ದಾರೆ, ಲೋಕಸಭೆಯಲ್ಲಿ ಶೇ.45ರಷ್ಟು ಮತ ನೀಡಿದ್ದಾರೆ. 1 ಸೀಟು ಹೊಂದಿದ್ದ ನಾವು 9 ಸೀಟು ಗೆದ್ದಿದ್ದೇವೆ. ಜನರ ತೀರ್ಪನ್ನು ನಾವು ಒಪ್ಪುತ್ತೇವೆ. ಈ ಸರ್ಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ. ಮುಡಾ ಹಗರಣ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತಿರುವುದು ಅನೈತಿಕ ಎಂದು ಹೇಳಿದರು.
ಮುಡಾ ಅಕ್ರಮದಲ್ಲಿ ಶ್ರೀಮತಿ ಪಾರ್ವತಿ ಹಾಗೂ ಸಿದ್ದರಾಮಯ್ಯ ಅವರ ತಪ್ಪೇನಿದೆ?. ಇಲ್ಲಿ ಅಕ್ರಮ ಏನು ನಡೆದಿದೆ? ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಖರೀದಿ ಮಾಡಿದ ಜಮೀನನ್ನು ಅರಿಶಿನ ಕುಂಕುಮಕ್ಕೆ ಉಡುಗೊರೆಯಾಗಿ ನೀಡಿದ್ದರು. ಆ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪರಿಣಾಮ ಅವರು ಪರಿಹಾರ ಅರ್ಜಿ ಸಲ್ಲಿಸಿದ್ದರು ಎಂದರು.
ನಾನಾಗಿದ್ದರೆ ಶೇ.100ರಷ್ಟು ಪರಿಹಾರ ನೀಡಿ ಎಂದು ಹೋರಾಟ ಮಾಡುತ್ತಿದ್ದೆ. ಆದರೆ ಪಾರ್ವತಿ ಅವರು ಮುಡಾದವರು 50:50 ಅನುಪಾತದಲ್ಲಿ ಪರಿಹಾರ ಪಡೆಯಲು ಒಪ್ಪಿದರು. ಅವರು ಪರಿಹಾರದ ಅರ್ಜಿ ಹಾಕುವಾಗ ಇಂತಹುದೇ ಜಾಗದಲ್ಲಿ ಪರಿಹಾರ ನೀಡಿ ಎಂದು ಕೇಳಿಲ್ಲ. ಮುಡಾದವರು ತಮ್ಮ ತಪ್ಪಿನ ಅರಿವಾಗಿ ಒಂದು ನಿರ್ಣಯಕ್ಕೆ ಬಂದು ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರು ನನ್ನ ಪತ್ನಿಗೆ ನಿವೇಶನ ನೀಡಿ ಎಂದು ಒತ್ತಡ ಹಾಕಿದ್ದಾರಾ? ಆದೇಶ ಮಾಡಿದ್ದಾರಾ? ಅಧಿಕಾರ ದುರುಪಯೋಗ ಮಾಡಿದ್ದಾರಾ? ಇಲ್ಲ. ಆದರೂ ಇದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಏಕೆ ಅಕ್ರಮ ಎಂದು ಕರೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:' ಯಾವ ಪಾದಯಾತ್ರೆಗಳೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ': ಜನಾಂದೋಲನ ಸಮಾವೇಶದಲ್ಲಿ ಘರ್ಜಿಸಿದ ಸಿಎಂ ಸಿದ್ದರಾಮಯ್ಯ - CM Siddaramaiah