ಬೆಂಗಳೂರು: ನನಗೆ ಬರುವ ನೋಟಿಸ್ ಓದಲು ಮಗನಿಗೆ ಕಾನೂನು ಓದಿಸುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ “ಭಾರತದ ಸಂವಿಧಾನ ಅಂಗೀಕಾರ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಕೀಲನಾಗಬೇಕು ಎಂದು ಆಸೆ ಇತ್ತು. ಆ ಸಮಯದಲ್ಲಿ ನನಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿತ್ತು. ದೇವರಾಜ ಅರಸು ಹಾಗೂ ಗುಂಡೂರಾವ್ ಅವರ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ನಾನು ವಕೀಲನಾಗಲಿಲ್ಲ. ಆದರೆ, ನನಗೀಗ ದಿನನಿತ್ಯ ಇಡಿ, ಆದಾಯ ತೆರಿಗೆ, ಸಿಬಿಐ ನೋಟಿಸ್ ಬರುತ್ತಿವೆ. ನನ್ನ ಕೈತುಂಬಾ ಈ ಸಂಸ್ಥೆಗಳ ನೋಟಿಸ್ಗಳಿವೆ. ಈ ನೋಟಿಸ್ಗಳನ್ನು ಓದಬೇಕು ಎಂಬ ಕಾರಣಕ್ಕೆ ನನ್ನ ಮಗನಿಗೆ ಕಾನೂನು ವ್ಯಾಸಂಗ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯವರು ಸಮಾಜ ಇಬ್ಭಾಗ ಮಾಡುತ್ತಾರೆ: ಬಿಜೆಪಿಯವರು ಕತ್ತರಿಯಂತೆ ಸಮಾಜವನ್ನು ಇಬ್ಭಾಗ ಮಾಡುತ್ತಾರೆ. ಕಾಂಗ್ರೆಸ್ ಸೂಜಿಯಂತೆ ಸಮಾಜವನ್ನು ಪರಸ್ಪರ ಬೆಸೆಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ. ಇಂದಿರಾ ಗಾಂಧಿ ಸಂವಿಧಾನದಲ್ಲಿ ಸಮಾಜವಾದ ಹಾಗೂ ಜಾತ್ಯತೀತ ತತ್ವ ಪದಗಳನ್ನು ಸೇರಿಸಿದ್ದರು. ಇದರ ವಿರುದ್ಧ ಅನೇಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸೋಮವಾರವಷ್ಟೇ ಆದೇಶ ಹೊರಡಿಸಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನಕ್ಕೆ ಅಪಾಯವಿದೆ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪ್ರಬುದ್ಧವಾಗಿ ವಾದ ಮಂಡಿಸಿದ್ದಾರೆ ಎಂದರು.
ನಮ್ಮ ದೇಶದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸುತ್ತೇವೆ. ಸ್ವಾತಂತ್ರ್ಯ ಬಂದ ನಂತರ ನಾವು ಮಹಾತ್ಮಾ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆದು, ಅವರಿಗೆ ಗೌರವ ನೀಡುತ್ತಿದ್ದೇವೆ. ಈ ಸಂವಿಧಾನ ಜಾರಿಯಾದ ನಂತರ ದೇಶದೆಲ್ಲೆಡೆ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನ ದೇವಾಲಯವಿಲ್ಲ, ಆದರೆ ರಾಮನ ಭಂಟ ಹನುಮಂತನ ದೇವಾಲಯ ಹೆಚ್ಚಾಗಿದೆ. ಸೇವೆ ಮಾಡುವವರಿಗೆ ಸಮಾಜ ಗುರುತಿಸಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.