ಶಿವಮೊಗ್ಗ:''ನಿನ್ನೆ ಬಿಜೆಪಿಯ 12 ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದು, ನನಗೆ ಅಘಾತ ಉಂಟುಮಾಡಿದೆ'' ಎಂದು ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗಲ್ಲಿ ಗಲ್ಲಿಗಳಲ್ಲಿ ಪಾರ್ಟಿ ಇಬ್ಭಾಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಿನ್ನೆ ಸಭೆ ನಡೆಸಿದವರು ಸಂಘಟನೆಯಲ್ಲಿದ್ದು, ಪಕ್ಷ ಕಟ್ಟಿದವರು. ಇವರು ಏನೇನು ನೋವು ಅನುಭವಿಸುದ್ದಾರೆ ಎಂಬುದನ್ನು ಹೇಳಿಲ್ಲ. ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. ಸಭೆ ನಡೆಸಿದವರು ಕೇವಲ ಹನ್ನೆರಡು ಜನ ಮಾತ್ರ ಅಂತ ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಾರ್ಟಿ ಎರಡಾಗುತ್ತದೆ'' ಎಂದರು.
''ಲೋಕಸಭೆ ಚುನಾವಣೆಯ ವೇಳೆಗೆ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿದ್ದು, ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಯಡಿಯೂರಪ್ಪ ಕುಟುಂಬದ ಕೈಗೆ ಅಧಿಕಾರ ನೀಡಿದ್ದಕ್ಕೆ ಲೋಕಸಭೆ ಚುನಾವಣೆಯಲ್ಲಿ ಬಜೆಪಿ 25 ಸೀಟಿನಿಂದ 17 ಸೀಟಿಗೆ ಇಳಿದಿದೆ" ಎಂದು ಟೀಕಿಸಿದರು.
''ಈ ಹಿಂದೆ ನಮ್ಮ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇತ್ತು. ಸಾಮೂಹಿಕ ನಾಯಕತ್ವದಲ್ಲಿಯೇ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿತ್ತು. ಯಡಿಯೂರಪ್ಪ ಸ್ವಜನ ಪಕ್ಷಪಾತ ಮಾಡಿದ್ದಾರೆ. ಬಿಜೆಪಿಯಲ್ಲಿ ಹಿಂದೂತ್ವವೇ ಹೊರಟು ಹೋಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.