ಶಿವಮೊಗ್ಗ:ರಾಜ್ಯಾಧ್ಯಕ್ಷನಾಗಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂಬ ಅಹಂಕಾರ ಇಲ್ಲ, ಬದಲಾಗಿ ಹೆಮ್ಮೆ ಇದೆ. ರಾಜ್ಯದಲ್ಲಿ ಯಡಿಯೂರಪ್ಪ, ಶಂಕರಮೂರ್ತಿ, ಅನಂತ ಕುಮಾರ್ ಅವರ ಹೋರಾಟ ಮತ್ತು ಶ್ರಮದಿಂದ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ. ಕರ್ನಾಟಕ ಬಿಜೆಪಿಯು ದಕ್ಷಿಣ ಭಾರತದ ಹೆಬ್ಬಾಗಿಲು, ಇದನ್ನು ಮುಂದಿನ ದಿನಗಳಲ್ಲಿ ರುಜುವಾತು ಮಾಡುವ ನಿಟ್ಟಿನಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗುತ್ತಿದ್ದು, ಗುರಿ ತಲುಪುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಗೆ ಜನ್ಮದಿನ ಶುಭಾಶಯ ಕೋರಿದ ವಿಜಯೇಂದ್ರ:ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಜನತೆಯ ಪರವಾಗಿ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಮೋದಿ ಅವರ ಜನ್ಮದಿನದ ಜೊತೆಗೆ ಕೇಂದ್ರದಲ್ಲಿ ಎನ್ಡಿಎ ಮೂರನೇ ಬಾರಿ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕಳೆದ 10 ವರ್ಷಗಳಲ್ಲಿ ದೇಶ ಸಮಗ್ರ ಅಭಿವೃದ್ಧಿಯಾಗಿದೆ. ಮೂರನೇ ಬಾರಿ ಅವರು ದೇಶದ ಅಧಿಕಾರ ನಡೆಸುತ್ತಿರುವುದನ್ನು ನೋಡುತ್ತಿದ್ದೇವೆ. ವಿಕಸಿತ ಭಾರತ ರೂಪಿಸುವ ಕೈಂಕರ್ಯವನ್ನು ಮಾಡುತ್ತಿದ್ದಾರೆ. 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ್ ಮಾಡಬೇಕೆಂಬ ಹಂಬಲವನ್ನು ಹೊಂದಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯವನ್ನು ಹಿಡಿದುಕೊಂಡಿದ್ದಾರೆ. ಕಳೆದ ನೂರು ದಿನಗಳಲ್ಲಿ 15 ಲಕ್ಷ ಕೋಟಿ ರೂ.ಗಳ ದೀರ್ಘಾವಧಿ ಯೋಜನೆಗೆ ಆದ್ಯತೆ ನೀಡಿದ್ದಾರೆ ಎಂದರು.