ಧಾರವಾಡ:ನನಗೆ ಧಾರವಾಡ ಹೈಕೋರ್ಟ್ ಪೀಠದ ಜೊತೆ ಸಂಬಂಧವಿದೆ. ನಾನು ಇಲ್ಲಿ ಪ್ರಕರಣವೊಂದರಲ್ಲಿ ವಾದ ಮಾಡಿದ್ದೆ ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ ಹೇಳಿದರು.
ಧಾರವಾಡ ಐಐಟಿಯಲ್ಲಿ ಜ್ಞಾನ ಸಂಪನ್ಮೂಲ ದತ್ತಾಂಶ ಕೇಂದ್ರ, ಸೆಂಟ್ರಲ್ ಲರ್ನಿಂಗ್ ಥಿಯೇಟರ್, ಹಾಗು ಎರಡು ಪ್ರವೇಶದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಧಾರವಾಡದ ಜೊತೆ ನನಗೆ ಹಳೆ ಸಂಬಂಧವಿದೆ ಎಂದರು. ಇದೇ ವೇಳೆ ಧಾರವಾಡ ಪೇಡಾ ನೆನಪಿಸಿಕೊಂಡರು.
ನಾನು ರಾಜ್ಯಸಭೆಯ ಸಭಾಪತಿ. ಬಲಗಡೆ ನೋಡಿದರೆ ಪ್ರಲ್ಹಾದ ಜೋಶಿ ಕಾಣ್ತಾರೆ. ಎಡಗಡೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಕಾಣ್ತಾರೆ. ಮಲ್ಲಿಕಾರ್ಜುನ ಖರ್ಗೆ ಬಹಳ ಅನುಭವಿ ರಾಜಕಾರಣಿ. ಜೋಶಿಯವರು ಬಹಳ ಅಚ್ಚುಕಟ್ಟಿನ ಕೆಲಸ ಮಾಡ್ತಾರೆ ಎಂದು ಹೊಗಳಿದರು.
ಸಭಾಪತಿ ಹೊರಟ್ಟಿ ಬಗ್ಗೆ ಮಾತನಾಡಿದ ಉಪರಾಷ್ಟ್ರಪತಿ, ಬಹಳ ಸಿಂಪಲ್ ಮನುಷ್ಯ ಎಂದರು. ವಿದ್ಯಾರ್ಥಿಗಳಿಂದಲೇ ದೇಶದ ಬದಲಾವಣೆ ಆಗಬೇಕಿದೆ. ದೇಶದ ಐಐಟಿಗಳಲ್ಲಿ ಯುವಕರು ಕಲಿಯುತ್ತಿದ್ದಾರೆ. ಕರ್ನಾಟಕ ರಾಜ್ಯದ ಮೊದಲ ಐಐಟಿ ಇದು. ಇಡೀ ವಿಶ್ವದಲ್ಲೇ ಧಾರವಾಡದ ಐಐಟಿ ಉತ್ತುಂಗಕ್ಕೇರಲಿದೆ. ಹಳೆ ವಿದ್ಯಾರ್ಥಿಗಳು ಐಐಟಿ ಜೊತೆ ಸಂಬಂಧ ಇಟ್ಟುಕೊಳ್ಳಬೇಕು. ಈಗ ಏನಿದ್ದರೂ ಮೆರಿಟ್ ಮೇಲೆ ಎಲ್ಲವೂ ನಡೆದಿದೆ. ಇದು ಇದೀಗ ನಡೆದಿರುವ ಬದಲಾವಣೆ ನಿಮಗೆ ಸ್ವಂತ ಅಲೋಚನೆ ಬೇಕು. ನಿಮಗೆ ಬೆಳೆಯಲು ಸ್ವಂತ ಶಕ್ತಿ ಬೇಕು. ದೇಶಕ್ಕೆ ಇದು ಅಮೃತಕಾಲ. ಇದೀಗ ಎಲ್ಲೆಡೆ ಮಹಿಳಾ ಶಕ್ತಿ ಹೆಚ್ಚಾಗಿದೆ. ಲೋಕಸಭೆಯಲ್ಲಿ ಶೇ.33ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. 2029ಕ್ಕೆ ಶೇ.33ರಷ್ಟು ಸಂಸದರು ಮಹಿಳೆಯರಿರುತ್ತಾರೆ ಎಂದು ತಿಳಿಸಿದರು.