ದಾವಣಗೆರೆ:ಪ್ರೀತಿಸಿ ಮದುವೆಯಾಗಿ ಹೆಂಡತಿಗೆ ಕಿರುಕುಳ ನೀಡಿ, ನಂತರ ಆಕೆಯ ಸಾವಿಗೆ ಕಾರಣನಾದ ಪತಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮಂಜುನಾಥ್ ಶಿಕ್ಷೆಗೆ ಗುರಿಯಾದ ಪತಿ. ಶಿಲ್ಪ ಮೃತಪಟ್ಟ ಪತ್ನಿ. ಶಿಲ್ಪ ಮತ್ತು ಮಂಜುನಾಥ್ ಪರಸ್ಪರ ಪ್ರೀತಿಸಿ ಮದುವೆಯಾಗಿ ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಂಜುನಾಥ್ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದರಿಂದ ನೊಂದು ಶಿಲ್ಪ ಮನೆ ಕಿಟಕಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ತನ್ನ ಎಡಗೈ ಮೇಲೆ ತನ್ನ ಸಾವಿಗೆ ಮಂಜು, ಕಲ್ಲೇಶ, ಸಂತೋಷ ಬಸಪ್ಪ ಅವರುಗಳೇ ಕಾರಣ ಎಂದು ಪೆನ್ನಿನಿಂದ ಬರೆದುಕೊಂಡಿದ್ದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹನುಮಂತಮ್ಮ ಎಂಬವರು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಶ್ರೀಮತಿ ಶಿಲ್ಪಾ ವೈ.ಎಸ್. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ, ಆರೋಪ ಸಾಬೀತಾಗಿದ್ದರಿಂದ ಮಂಜುನಾಥ್ಗೆ 6 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ಸತೀಶ್ ಕುಮಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ:ಚಾಮರಾಜನರ: ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ಚಾಲಕ ಸಾವು