ಕರ್ನಾಟಕ

karnataka

ETV Bharat / state

ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ - HUSBAND SENTENCED TO LIFE

ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಬಗ್ಗೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇದ್ದ ಕಾರಣ ವೈದ್ಯಕೀಯ ಸಾಕ್ಷ್ಯದ ಸಹಾಯ ಪಡೆದು ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

3rd Additional District and Sessions Court
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ETV Bharat)

By ETV Bharat Karnataka Team

Published : Feb 6, 2025, 6:03 PM IST

ಮಂಗಳೂರು : ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಪ್ರಕರಣದಲ್ಲಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ಅಂಡ್ಯಡ್ಕದ ರಾಜ (64) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ಹಿನ್ನೆಲೆ : ಈ ಪ್ರಕರಣದ ಆರೋಪಿ ರಾಜ ಪ್ರತಿದಿನ ಕುಡಿದು ಬಂದು ತನ್ನ ಹೆಂಡತಿ ಕಮಲಾ ಜೊತೆ ಗಲಾಟೆ ಮಾಡುತ್ತಿದ್ದನು. ದಂಪತಿ 2022ರ ಸೆಪ್ಟೆಂಬರ್​ 4 ರಂದು ರಬ್ಬರ್​ ಟ್ಯಾಪಿಂಗ್​ ಕೆಲಸ ಕೇಳಿಕೊಂಡು, ಬೆಳ್ತಂಗಡಿ ತಾಲೂಕು ಕೊಯ್ಯರು ಗ್ರಾಮದ ಅಲೆಕ್ಕಿ ಎಂಬಲ್ಲಿನ ಧರ್ಣಪ್ಪ ಗೌಡ ಅವರ ಮನೆಗೆ ತೆರಳಿದ್ದರು. ಅವರು ಕೆಲಸವನ್ನೂ ನೀಡಿ, ರಬ್ಬರ್ ತೋಟದಲ್ಲಿರುವ ಶೆಡ್​ ತರಹದ ಮನೆಯಲ್ಲಿ ಉಳಿದುಕೊಳ್ಳಲೂ ಅವಕಾಶ ನೀಡಿದ್ದರು.

2022 ಸೆ.6 ರಂದು ಸಂಜೆ ಆರೋಪಿ ತನ್ನ ಹೆಂಡತಿ ಜೊತೆ ಎಂದಿನಂತೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿದ್ದನು. ಜಗಳ ಮುಂದುವರಿದು ರಾತ್ರಿ 8 ಗಂಟೆಗೆ ಆರೋಪಿಯು ಕೋಪದಿಂದ ಹೆಂಡತಿ ಕುತ್ತಿಗೆಯನ್ನು ಒತ್ತಿ ಹಿಡಿದಾಗ ಕಮಲಾ ನೆಲಕ್ಕೆ ಬಿದ್ದಿದ್ದರು. ಆ ವೇಳೆ ಆರೋಪಿ ಕಮಲಾ ಅವರ ತಲೆಯನ್ನು ನೆಲಕ್ಕೆ ಜೋರಾಗಿ ಗುದ್ದಿ, ಬಳಿಕ ತನ್ನ ಲುಂಗಿಯೊಂದನ್ನು ಹರಿದು ಹಗ್ಗದ ರೀತಿ ಮಾಡಿ ಅದರಿಂದ ಕಮಲಾ ಅವರ ಕುತ್ತಿಗೆಗೆ ಬಿಗಿದ ಪರಿಣಾಮ ಕಮಲಾ ಮೃತಪಟ್ಟಿದ್ದರು.

ನಂತರ ಆರೋಪಿ ಕಮಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ರೀತಿಯ ಸಾಕ್ಷ್ಯವನ್ನು ಸೃಷ್ಟಿಸಿ ಜಾಗದ ಮಾಲೀಕ ಧರ್ಣಪ್ಪ ಗೌಡರ ಮಗ ಪ್ರಮೋದ್ ಅವರಿಗೆ ತಿಳಿಸಿದ್ದನು. ಆ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ದೂರು ನೀಡಿದ್ದರು. ಶವ ಪರೀಕ್ಷೆ ನಡೆಸಿದ ದೇರಳಕಟ್ಟೆಯ ವೈದ್ಯಾಧಿಕಾರಿ ಡಾ. ವರ್ಷಾ ಶೆಟ್ಟಿ ಇದೊಂದು ಕೊಲೆ ಪ್ರಕರಣವೆಂದು ವರದಿ ನೀಡಿದ ಮೇರೆಗೆ ಆರೋಪಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಾಥಮಿಕ ತನಿಖೆಯನ್ನು ಅಂದಿನ ಪೊಲೀಸ್ ಉಪ ನಿರೀಕ್ಷಕ ನಂದ ಕುಮಾರ್ ಎಮ್.ಎಮ್ ನಡೆಸಿದ್ದರು. ನಂತರ ಪೂರ್ಣ ಪ್ರಮಾಣದ ತನಿಖೆಯನ್ನು ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ನಿರೀಕ್ಷಕ ಶಿವಕುಮಾರ್ ಬಿ. ಪೂರ್ಣಗೊಳಿಸಿದ್ದರು. ಆರೋಪಿಯ ವಿರುದ್ಧ ಕಲಂ 302 ಐಪಿಸಿ ರಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪಿ ವಿರುದ್ಧ ಒಟ್ಟು 17 ಸಾಕ್ಷಿದಾರರನ್ನು ವಿಚಾರಿಸಿದೆ. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶೆ ಸಂಧ್ಯಾ ಎಸ್., ಆರೋಪಿ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿ ಜೀವಾವಧಿ ಕಾರಾಗೃಹವಾಸದ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿದ್ದಾರೆ. ಮೃತರ ಮೂವರುಮಕ್ಕಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ಮಹತ್ವವಾದ ವೈದ್ಯಕೀಯ ಸಾಕ್ಷ್ಯ :ಕಮಲಾ ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ. ಬದಲಾಗಿ ಅವರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ಶವ ಪರೀಕ್ಷೆ ವರದಿ ನೀಡಿದ ಮೇರೆಗೆ 2022ರ ಸೆ.10 ರಂದು ಕೊಲೆ ಪ್ರಕರಣ ದಾಖಲಾಗಿತ್ತು. ಅದೇ ರೀತಿ ವೈದ್ಯಾಧಿಕಾರಿ ತಾವು ನೀಡಿದ ಶವ ಪರೀಕ್ಷಾ ವರದಿಗೆ ಪೂರಕವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇದ್ದ ಕಾರಣ ಆರೋಪಿಯ ವಿರುದ್ಧದ ಆರೋಪವನ್ನು ವೈದ್ಯಕೀಯ ಸಾಕ್ಷ್ಯದ ಸಹಾಯದಿಂದ ರುಜುವಾತು ಮಾಡಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್.ಬಿ ನಡೆಸಿ ವಾದ ಮಂಡಿಸಿದರು.

ಇದನ್ನೂ ಓದಿ:ಪ್ರಜ್ಞೆ ತಪ್ಪುವ ಪದಾರ್ಥ ನೀಡಿ ಪಾರ್ಟಿಯಲ್ಲಿ ಯುವತಿಯ ಅತ್ಯಾಚಾರ: 10 ವರ್ಷ ಕಠಿಣ ಸಜೆ, ದಂಡ

ABOUT THE AUTHOR

...view details